ಉಡುಪಿ: ಕಳೆದ ಒಂದು ವರ್ಷದಿಂದ ಉಡುಪಿಯ ಕಾಪು ತಾಲೂಕಿನ ಗ್ರಾಮಸ್ಥರಿಗೆ ಜೀವಭಯ ಹುಟ್ಟಿಸಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಪು ತಾಲೂಕಿನ ಪಾಂಬೂರು ವ್ಯಾಪ್ತಿಯಲ್ಲಿ ಅರಣ್ಯಾಧಿಕಾರಿಗಳು ಮತ್ತು ಗ್ರಾಮಸ್ಥರು ಜಂಟಿ ಕಾರ್ಯಾಚರಣೆ ಮಾಡಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ. 8 ವರ್ಷದ ದೊಡ್ಡ ಗಂಡು ಚಿರತೆ ಶಿರ್ವ, ಪಾಂಬೂರು ಮತ್ತು ಕಾಪು ವ್ಯಾಪ್ತಿಯಲ್ಲಿ ಜನರಿಗೆ ನಡುಕ ಹುಟ್ಟಿಸಿತ್ತು. ಮನೆಯ ಅಂಗಳಕ್ಕೆ ಬಂದು ನಾಯಿಯನ್ನು ಹೊತ್ತೊಯ್ಯುತ್ತಿತ್ತು. ಹಟ್ಟಿಯಲ್ಲಿದ್ದ ಹಸುವಿನ ಮೇಲೆ ಕೂಡಾ ದಾಳಿ ಮಾಡಿತ್ತು. ಈಗ ಹಲವಾರು ತಿಂಗಳಿಂದ ಸ್ಥಳೀಯ ಜನರಲ್ಲಿ ಭಯ ಹುಟ್ಟಿಸಿದ್ದ ಚಿರತೆಯನ್ನು ಬೋನಿನೊಳಗೆ ಹಾಕುವಲ್ಲಿ ಈಗ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಅರಣ್ಯ ಇಲಾಖೆಗೆ ಸ್ಥಳೀಯರಿಂದ ನೂರಾರು ದೂರು ಬಂದಿತ್ತು. ಆದ್ದರಿಂದ ಅರಣ್ಯಾಧಿಕಾರಿಗಳು ಬೋನುಗಳನ್ನು ಇಟ್ಟಿದ್ದರು. ಹಲವೆಡೆ ಬೋನು ಇಟ್ಟರೂ ಚಿರತೆ ಬಿದ್ದಿರಲಿಲ್ಲ. ಪಾಂಬೂರಿನಲ್ಲಿ ಎರಡು ದಿನದ ಹಿಂದೆ ಇಟ್ಟ ಬೋನಿನೊಳಗೆ ನಾಯಿಯನ್ನು ತಿನ್ನಲು ಚಿರತೆ ಬಂದಿದೆ. ಆಗ ಬೋನ್ ಲಾಕ್ ಆಗಿದೆ. ಬೆಳಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದಾರೆ. ಅಷ್ಟರಲ್ಲಿ ಸೆರೆ ಸಿಕ್ಕ ಸುದ್ದಿ ತಿಳಿದು ಜನರು, ಮಕ್ಕಳು ಚಿರತೆಯನ್ನು ನೋಡಲು ಮುಗಿಬಿದ್ದಿದ್ದರು.
ಆಹಾರ ಅರಸುತ್ತಾ ನಾಡಿಗೆ ಬರುವ ಚಿರತೆಗಳ ಸಂಖ್ಯೆ ಜಾಸ್ತಿಯಾಗಿದೆ. ಜನರ ನೆಮ್ಮದಿ ಕಾಪಾಡುವ ಜೊತೆಗೆ ಕಾಡು ಪ್ರಾಣಿಗಳ ರಕ್ಷಣೆ ಕೂಡಾ ನಮ್ಮ ಜವಾಬ್ದಾರಿ. ಇತ್ತೀಚಿನ ವರ್ಷಗಳಲ್ಲಿ ಇಷ್ಟು ದೊಡ್ಡ ಗಾತ್ರದ ಚಿರತೆ ಸೆರೆ ಸಿಕ್ಕಿಲ್ಲ. ಚಿರತೆಯನ್ನು ಪಶ್ಚಿಮ ಘಟ್ಟಕ್ಕೆ ಬಿಡಲಾಗುತ್ತದೆ ಎಂದು ಅರಣ್ಯಾಧಿಕಾರಿ ಕ್ಲಿಫರ್ಡ್ ತಿಳಿಸಿದ್ದಾರೆ.
ವಲಯ ಅರಣ್ಯಾಧಿಕಾರಿ ಗಣಪತಿ ನಾಯ್ಕ ನೇತೃತ್ವದಲ್ಲಿ ಕಾರ್ಯಚರಣೆ ನಡೆದಿದ್ದು, ಸ್ಥಳೀಯರು ಸಹಕಾರ ನೀಡಿದ್ದಾರೆ.