Connect with us

Chikkamagaluru

ಹೊಲಕ್ಕೆ ನುಗ್ಗಿ ಅರಣ್ಯಾಧಿಕಾರಿಗಳ ಆಟಾಟೋಪ – ರೈತ ಮಹಿಳೆಯರ ಮೇಲೆ ಜೀಪ್ ಹತ್ತಿಸಲು ಯತ್ನ

Published

on

ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಅರಣ್ಯಾಧಿಕಾರಿಗಳು ಮಾನವೀಯತೆಯನ್ನ ಮೀರಿ ವರ್ತಿಸಿದ್ದಾರೆ. ನ್ಯಾಯವಾಗಿ ಉಳುಮೆ ಮಾಡಿ ಬದುಕ್ತಿದ್ದ ರೈತರಿಗೆ ಇನ್ನಿಲ್ಲದ ಕಿರುಕುಳ ಕೊಡ್ತಿದ್ದಾರೆ.

ಜಿಲ್ಲೆಯ ತರೀಕೆರೆ ತಾಲೂಕಿನ ಎಂಸಿ ಹಳ್ಳಿಯಲ್ಲಿ ಅರಣ್ಯಾಧಿಕಾರಿಗಳು ಸರ್ಕಾರಿ ವಾಹನವನ್ನ ಹೊಲಕ್ಕೆ ನುಗ್ಗಿಸಿ ತಮ್ಮ ರೌದ್ರಾವತಾರ ಪ್ರದರ್ಶಿಸಿದ್ದಾರೆ. ಇದು ಬಗರ್‍ಹುಕುಂ ಸಾಗುವಳಿದಾರರ ಮೇಲೆ ಸಿಎಂ ಸಿದ್ದರಾಮಯ್ಯ ಸರ್ಕಾರದ ಅಧಿಕಾರಿಗಳೇ ತೋರಿದ ದರ್ಪ, ದೌಲತ್ತಿನ ಪರಿ. ಇಲ್ಲಿಯ ಸರ್ವೇ ನಂಬರ್ 4ರಲ್ಲಿ 201 ಎಕರೆಯಷ್ಟಿರುವ ಕಂದಾಯ ಭೂಮಿಯಲ್ಲಿ ರೈತರು 40 ವರ್ಷಗಳಿಂದ ಉಳುಮೆ ಮಾಡ್ತಿದ್ದಾರೆ. ಆದ್ರೆ ಅರಣ್ಯ ಇಲಾಖೆ ಮಾತ್ರ ಇದು ನಮಗೆ ಸೇರಿದ ಭೂಮಿ ಅಂತಾ ಹೇಳಿ ವಾದಿಸ್ತಿದೆ. ಜೊತೆಗೆ ಜೀಪ್ ಹತ್ತಿಸಿಯಾದ್ರೂ ಪರ್ವಾಗಿಲ್ಲ ರೈತರನ್ನು ಓಡಿಸಬೇಕೆಂಬ ಹಠಕ್ಕೆ ಬಿದ್ದಿದೆ.

ಅರಣ್ಯ ಇಲಾಖೆ ಭೂಮಿಯೇ ಅಲ್ಲ: ಅಂದಹಾಗೆ ಇದು ಅರಣ್ಯ ಇಲಾಖೆಗೆ ಸೇರಿದ ಭೂಮಿಯೇ ಅಲ್ಲ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ಅನ್ನದಾತರಿಗೆ ಕೊಡಬಾರದ ಕಾಟ, ಹಿಂಸೆ ಕೊಡ್ತಿದ್ದಾರೆ. ವಿನಾಕಾರಣ ಕೇಸುಗಳನ್ನು ಹಾಕಿ ತಮ್ಮ ಅಧಿಕಾರದ ಅಮಲನ್ನು ಪ್ರದರ್ಶಿಸ್ತಿದ್ದಾರೆ.

ಬಗರ್‍ಹುಕುಂ ಭೂಮಿಯಲ್ಲಿ ಮಾಜಿ ಶಾಸಕರ ಅಡಿಕೆ ತೋಟ: ವಿಚಿತ್ರ ಅಂದ್ರೆ ಸದ್ಯ ರೈತರು ಸಂಘರ್ಷ ಮಾಡ್ತಿರೋ ಬಗರ್‍ಹುಕುಂ ಭೂಮಿಯ ಪಕ್ಕದಲ್ಲೇ ಇರುವ ಎಂಟು ಎಕರೆ ಬಗರ್ ಹುಕುಂ ಭೂಮಿಯಲ್ಲಿ ಭದ್ರಾವತಿಯ ಮಾಜಿ ಶಾಸಕ ಬಿಕೆ ಸಂಗಮೇಶ್ ಅವರಿಗೆ ಸೇರಿದ ಅಡಿಕೆ ತೋಟ ಕಂಗೊಳಿಸ್ತಿದೆ. ಆದರೆ ಆ ಪ್ರಭಾವಿ ಶಾಸಕರನ್ನ ಹೋಗಿ ಪ್ರಶ್ನಿಸುವ ಧೈರ್ಯ ಅರಣ್ಯ ಇಲಾಖೆಗೆ ಇಲ್ಲ. ಆದ್ರೆ ಬಡ ರೈತರು ಬೆಳೆದ ತೆಂಗು, ಬಾಳೆಯನ್ನು ಮಾತ್ರ ಹಿಂದೆ-ಮುಂದೆ ನೋಡದೇ ಕಡಿದು ಹಾಕ್ತಿದ್ದಾರೆ.

ಸ್ಪೀಕರ್ ಆಗಿದ್ದಾಗ ಬಗರ್‍ಹುಕುಂ ವಿಷಯದಲ್ಲಿ ಸರ್ಕಾರದ ವಿರುದ್ಧ ಬುಸುಗುಡುತ್ತಲ್ಲೇ ಇದ್ದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಈಗ ಎಲ್ಲಿ ಹೋದರು ಅನ್ನೋದೇ ಇಲ್ಲಿನವರ ಪ್ರಶ್ನೆಯಾಗಿದೆ. ಈಗಾಗಲೇ ಬಗರ್‍ಹುಕುಂ ಬೇಸಾಯಗಾರರಿಗೆ ಹಕ್ಕುಪತ್ರಗಳನ್ನು ವಿತರಿಸುವಂತೆ ಕಾಗೋಡು ತಿಮ್ಮಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದ್ರೆ ತರೀಕೆರೆ ತಹಶೀಲ್ದಾರ್ ಆಗ್ಲಿ, ಜಿಲ್ಲಾಧಿಕಾರಿಯಾಗಲೀ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

https://youtu.be/80CkEfVEk84

Click to comment

Leave a Reply

Your email address will not be published. Required fields are marked *