ಬೆಂಗಳೂರು: ಬಂಡೀಪುರದಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಅರಣ್ಯ ಸಚಿವರಾದ ಆರ್. ಶಂಕರ್ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಿಎಂರವರು ಕೇಂದ್ರ ಸಚಿವ ಗಡ್ಕರಿ ಅವರಿಗೆ ಭರವಸೆಯನ್ನು ನೀಡಿರುವುದು ಕೇವಲ ಮಾತುಕತೆಯಾಗಿತ್ತು. ವನ್ಯಜೀವಿಗಳ ಮೇಲಿನ ತೊಂದರೆಯಿಂದಾಗಿ ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ನಿರಾಕರಿಸಿ, ಈ ಸಂಬಂಧ ರಾಜ್ಯ ಸರ್ಕಾರದ ಪರವಾಗಿ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.
ಕೇರಳ ಹಾಗೂ ಕೇಂದ್ರ ಸರ್ಕಾರ ಬಂಡೀಪುರದಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ. ಈ ಮೊದಲಿನಂತೆ ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆವರೆಗೆ ವಾಹನ ಸಂಚಾರಕ್ಕೆ ಹೆದ್ದಾರಿಯಲ್ಲಿ ಅವಕಾಶವಿಲ್ಲ. ಕೇವಲ ಕರ್ನಾಟಕದ ಹಾಗೂ ಕೇರಳದ ತುರ್ತು ವಾಹನಗಳ ಓಡಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ ಎಂದರು.
ಬಂಡೀಪುರ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳಿಗೆ ತೊಂದರೆಯಾಗುತ್ತದೆ ಎನ್ನುವ ಕಾರಣದಿಂದ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದೇವೆ. ಕೇರಳ ಎರ್ಕಾರವು ಎಲಿವೇಟೆಡ್ ರಸ್ತೆ ನಿರ್ಮಾಣಕ್ಕೆ ಬೇಡಿಕೆಯನ್ನು ಇಟ್ಟಿತ್ತು ಎಂದು ಆರ್. ಶಂಕರ್ ಹೇಳಿದರು. ಇದನ್ನೂ ಓದಿ: ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರವನ್ನು ನಿಷೇಧಿಸಿದ್ದು ಯಾಕೆ? ಇಲ್ಲಿದೆ ಪೂರ್ಣ ವಿವರ