ಮಂಡ್ಯ: ಜಿಲ್ಲೆಯ ಕೆ.ಆರ್ ಪೇಟೆ ಕ್ಷೇತ್ರದ ಬಿಜೆಪಿ ಶಾಸಕ ನಾರಾಯಣಗೌಡ ವಿರುದ್ಧ ಈಗ ಭೂ ಕಬಳಿಕೆಯ ಆರೋಪ ಕೇಳಿ ಬಂದಿದೆ. ನಿಯಮ ಬಾಹಿರವಾಗಿ ವ್ಯಕ್ತಿಯೊಬ್ಬರಿಂದ ಅರಣ್ಯ ಭೂಮಿಯನ್ನು 999 ವರ್ಷಗಳಿಗೆ ಭೋಗ್ಯಕ್ಕಾಗಿ ತಮ್ಮ ಪತ್ನಿಯ ಹೆಸರಿನಲ್ಲಿ ಭೂಮಿ ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಭೋಗ್ಯಕ್ಕೆ ಭೂಮಿ ಪಡೆದುಕೊಂಡಿರುವ ದಿನವೇ ಅವರ ಪತ್ನಿಯ ಹೆಸರಿನಲ್ಲಿ ನಾರಾಯಣಗೌಡ ಭೂಮಿಯನ್ನು ಕ್ರಮ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಅವ್ಯವಹಾರ ನಡೆದಿರುವಂತೆ ಕಂಡು ಬಂದಿದೆ. ಹೀಗಾಗಿ ಈ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು ಎಂಬ ಕೂಗು ಕೇಳಿ ಬಂದಿದೆ.
Advertisement
Advertisement
ಕೆ.ಆರ್ ಪೇಟೆ ತಾಲೂಕಿನ ಶೀಳನೆರೆ ಹೋಬಳಿ ವ್ಯಾಪ್ತಿಯ ಮಾದಿಗರ ಹೊಸಹಳ್ಳಿ ಗ್ರಾಮದ ಸರ್ವೆ ನಂ. 14 ಮತ್ತು ಅದರ ಸುತ್ತ 25 ಎಕ್ರೆ ಭೂಮಿಯನ್ನು ಎಚ್.ಟಿ ವೆಂಕಟೇಶ್ ಅವರಿಂದ 999 ವರ್ಷಗಳ ಭೋಗ್ಯಕ್ಕೆ ಕೇವಲ 5 ಲಕ್ಷ ರೂಪಾಯಿಗಳನ್ನು ಕೊಟ್ಟು, ನಾರಾಯಣಗೌಡ ತಮ್ಮ ಹಾಗೂ ಕುಟುಂಬದ ಸದಸ್ಯರ ಹೆಸರಿನಲ್ಲಿ ಅಕ್ರಮವಾಗಿ ಖರೀದಿಸಿದ್ದಾರೆ ಎನ್ನಲಾಗಿದೆ. ವಿವಿಧ ಸರ್ವೆ ನಂಬರ್ ಗಳಲ್ಲಿ ತಮ್ಮ ಹೆಸರಿನಲ್ಲಿ 24 ಎಕ್ರೆ, ಪತ್ನಿ ದೇವಕಿ ಹೆಸರಿನಲ್ಲಿ 25 ಎಕ್ರೆ ಭೂಮಿಯನ್ನು ಅಕ್ರಮವಾಗಿ ಭೋಗ್ಯ ಮಾಡಿಕೊಂಡಿದ್ದು, ಮಕ್ಕಳಾದ ಕೋಯಿಲ್, ನೇಹಾ ಹೆಸರಿನಲ್ಲಿ 6 ಎಕ್ರೆ ಭೂಮಿಯನ್ನು ಖರೀದಿಸಿದ್ದು, ಒಟ್ಟು 55 ಎಕ್ರೆ ಭೂಮಿಯನ್ನ ಅಕ್ರಮವಾಗಿ ಖರೀದಿಸಿದ್ದಾರೆ ಎನ್ನಲಾಗಿದೆ.
Advertisement
Advertisement
ಇದರಲ್ಲಿ ಸರ್ವೆ ನಂ. 14ರಲ್ಲಿ 223 ಎಕ್ರೆ 30 ಗುಂಟೆ ಅರಣ್ಯ ಭೂಮಿಯಾಗಿರುತ್ತದೆ. 1982ರಲ್ಲಿ ಸರ್ಕಾರವು ಈ ಭೂಮಿಯನ್ನು ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುತ್ತದೆ ಎಂದಿತ್ತು. ಹೀಗಾಗಿ ಸದ್ಯ ಮೇಲುಕೋಟೆ ವನ್ಯಜೀವಿ ವಿಭಾಗದ ಮೀಸಲು ಅರಣ್ಯಕ್ಕೆ ಈ ಭೂಮಿ ಸೇರಿದೆ. ನಾರಾಯಣಗೌಡರು ಒಬ್ಬ ಶಾಸಕರಾಗಿ ಅರಣ್ಯವನ್ನು ರಕ್ಷಿಸಬೇಕಾದ ಜವಾಬ್ದಾರಿ ಹೊತ್ತವರು. ಆದರೆ ಈಗ ಅವರೇ ಕಾನೂನು ಬಾಹಿರವಾಗಿ ಅರಣ್ಯ ಭೂಮಿ ಖರೀದಿಸಲು ಪ್ರಯತ್ನಿಸುವುದು ಮತ್ತು ಅದನ್ನು ಭೋಗ್ಯಕ್ಕೆ ಪಡೆದುಕೊಂಡಿರುವ ಆರೋಪ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಕಳೆದ ಹಲವು ವರ್ಷಗಳ ಹಿಂದೆ ಸರ್ಕಾರ ಉಳುಮೆ ಮಾಡುತ್ತಿದ್ದವರಿಗೆ ಭೂಮಿಯ ಹಕ್ಕು ನೀಡಿದ್ದು, ಎಲ್ಲರಿಗೂ ಸರ್ಕಾರದಿಂದ ಜಮೀನು ಮಂಜೂರು ಮಾಡಲಾಗಿದೆ. ಅಲ್ಲದೆ ಆರ್‍ಟಿಸಿಗಳನ್ನ ಕೈ ಬರಹದಿಂದ ಬರೆಯುತ್ತಿದ್ದ ದಿನಗಳಲ್ಲಿ ನಾರಾಯಣಗೌಡರು ಒತ್ತಡ ಹಾಕಿ ತಮಗಿಷ್ಟ ಬಂದ ಹಾಗೆ ದಾಖಲೆಗಳನ್ನ ಸೃಷ್ಟಿಸಿಕೊಂಡು ಭೂಮಿಯನ್ನ ಅಕ್ರಮವಾಗಿ ಪರಬಾರೆ ಮಾಡಿಕೊಂಡಿದ್ದಾರೆ. ಜೊತೆಗೆ ಅವರು ಇತ್ತೀಚಿನ ದಿನಗಳಲ್ಲಿ ತಮ್ಮ ಮಕ್ಕಳ ಹೆಸರಿನಲ್ಲೂ ಸಹ 6 ಎಕ್ರೆ ಭೂಮಿಯನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ಆದರೆ ಆ ಸರ್ವೇ ನಂಬರ್‍ಗಳು ದುರಸ್ಥಿಯಾಗಿಲ್ಲ. ಆದರೂ ಉಪ ನೋಂದಣಾಧಿಕಾರಿ ಮುಖಾಂತರ ಕ್ರಯ ಪತ್ರದ ಮೂಲಕ ನಾರಾಯಣಗೌಡರು ಭೂಮಿ ಖರೀದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಯಾವುದೇ ಅರಣ್ಯ ಪ್ರದೇಶವನ್ನು ಅರಣ್ಯೇತರ ಎಂದು ಘೋಷಿಸಬೇಕಾದರೆ, ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ. ಆದರೆ ಪ್ರಸ್ತುತ ಮೇಲುಕೋಟೆಯ ಅರಣ್ಯ ಪ್ರದೇಶದಲ್ಲಿನ ಮಾದಿಗರ ಹೊಸಹಳ್ಳಿಯ 223.36 ಎಕ್ರೆ ಪ್ರದೇಶದಲ್ಲಿ 103 ಎಕ್ರೆಯಷ್ಟು ಭೂಮಿಯನ್ನು ಕೈಬಿಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿದ್ದು, ಈ ಬಗ್ಗೆಯೂ ತನಿಖೆ ನಡೆಸುವಂತೆ ಆಗ್ರಹಿಸಲಾಗಿದೆ.
ಈ ಆರೋಪಕ್ಕೆ ಸಂಬಂಧಿಸಿದಂತೆ ನಾರಾಯಣಗೌಡ ಅವರನ್ನ ಕೇಳಿದರೆ, ಎಲ್ಲವೂ ಕಾನೂನಾತ್ಮಕವಾಗಿಯೇ ನಡೆದಿದೆ. ಯಾವುದೇ ಅಕ್ರಮ, ಅವ್ಯವಹಾರ ನಡೆದಿಲ್ಲ ಎನ್ನುತ್ತಿದ್ದಾರೆ. ಆದರೆ ನಾರಾಯಣಗೌಡರ ಪತ್ನಿ ಹೆಸರಿಗೆ ಭೂಮಿಯನ್ನ ಭೋಗ್ಯ ಮತ್ತು ಕ್ರಯಕ್ಕೆ ಮಾಡಿರುವ ವ್ಯಕ್ತಿಗಳಿಗೆ ಆ ಭೂಮಿ ಹೇಗೆ ಬಂದಿತ್ತು? ಎನ್ನೋದನ್ನ ಪತ್ತೆ ಮಾಡಿದರೆ ಎಲ್ಲಾ ಆರೋಪಗಳಿಗೂ ಉತ್ತರ ಸಿಕ್ಕಂತಾಗುತ್ತದೆ. ಹೀಗಾಗಿ ಸರ್ಕಾರ ಈ ಬಗ್ಗೆ ಪರಿಶೀಲನೆ ನಡೆಸಬೇಕಿದೆ.