ಕೋಲಾರ: ಕಳೆದ 2 ದಶಕಗಳಿಂದ ವಿವಾದದ ಕೇಂದ್ರವಾಗಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್ (Ramesh Kumar) ಅರಣ್ಯ ಭೂಮಿ ಒತ್ತುವರಿ ಪ್ರಕರಣಕ್ಕೂ ಸಂಕ್ರಮಣ ಸಮೀಪವಾದಂತಿದೆ. ಸಂಕ್ರಾಂತಿ ಮಾರನೇ ದಿನವಾದ ಇಂದು ರಮೇಶ್ ಕುಮಾರ್ ಅರಣ್ಯ ಭೂಮಿ ಒತ್ತುವರಿ (Forest Land Encroachment) ಪ್ರಕರಣದ ಜಂಟಿ ಸರ್ವೆಗೆ (Survey) ದಿನಾಂಕ ನಿಗದಿ ಮಾಡಲಾಗಿದ್ದು, ಜಂಟಿ ಸರ್ವೆಗೆ ಜಿಲ್ಲಾಡಳಿತ ಸಿದ್ಧವಾಗಿದೆ.
ಕಳೆದ ಎರಡು ತಿಂಗಳಲ್ಲಿ ಮೂರು ಬಾರಿ ಜಂಟಿ ಸರ್ವೆ ಕಾರ್ಯವನ್ನು ಮುಂದೂಡಲಾಗಿತ್ತು. ಆದರೆ ಅಂತಿಮವಾಗಿ ಇಂದು ಜಂಟಿ ಸರ್ವೆ ಕಾರ್ಯಕ್ಕೆ ದಿನ ನಿಗದಿ ಮಾಡಲಾಗಿದೆ. ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಕೋಲಾರ ಜಿಲ್ಲಾಡಳಿತ ಮಾಡಿಕೊಂಡಿದೆ. ಕಳೆದೆರಡು ದಶಕಗಳಿಂದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮೇಲೆ ಕೇಳಿ ಬರುತ್ತಿರುವ ಅರಣ್ಯ ಭೂಮಿ ಒತ್ತುವರಿ ಆರೋಪಕ್ಕೆ ಹೈಕೋರ್ಟ್ ಅಂತಿಮ ಗಡುವು ನೀಡಿ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಜಂಟಿ ಸರ್ವೆ ಕಾರ್ಯ ನಿಗದಿ ಮಾಡಲಾಗಿದೆ. ಇದನ್ನೂ ಓದಿ: ಅಯ್ಯಪ್ಪ ಸ್ವಾಮಿ ಜಾತ್ರೆಯಲ್ಲಿ ಭಕ್ತರ ಮೇಲೆ ಹರಿದ ಕಾರು – ಯುವತಿ ಸಾವು, 8 ಮಂದಿಗೆ ಗಾಯ
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕು ಜಿನಕಲಕುಂಟೆ ಅರಣ್ಯ ಪ್ರದೇಶದಲ್ಲಿನ ಹೊಸಹುಡ್ಯ ಗ್ರಾಮದ ಸರ್ವೆ ನಂ1 ಮತ್ತು 2ರಲ್ಲಿ 61.39 ಗುಂಟೆ ಅರಣ್ಯ ಭೂಮಿಯನ್ನು ರಮೇಶ್ ಕುಮಾರ್ ಒತ್ತುವರಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಸದ್ಯ ಪ್ರಕರಣದ ಕುರಿತು ನ್ಯಾಯಾಲಯದಲ್ಲಿ ಪರ-ವಿರೋಧ ಹೋರಾಟಗಳು ಕಳೆದ ಎರಡು ದಶಕಗಳಿಂದ ನಡೆಯುತ್ತಲೇ ಇದೆ. ಈ ನಡುವೆ ಹೈಕೋರ್ಟ್ ಸರ್ವೆ ಮಾಡಿ ಮುಗಿಸಿ ಜನವರಿ 30ರ ಒಳಗಾಗಿ ವರದಿ ಸಲ್ಲಿಸುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಜಂಟಿ ಸರ್ವೆ ಮಾಡಲಾಗುತ್ತಿದೆ. ಇದನ್ನೂ ಓದಿ: ವಿವಿಧ ಖಾದ್ಯಗಳನ್ನು ತಂದು ವೃಕ್ಷಗಳ ಮಧ್ಯೆ ಕುಳಿತು ಊಟ ಮಾಡಿ ಸಂಭ್ರಮಿಸಿದ ಜನತೆ
ಈ ವಿವಾದದಲ್ಲಿ ರಮೇಶ್ ಕುಮಾರ್ ಬೆನ್ನಿಗೆ ಇಡೀ ಸರ್ಕಾರ ನಿಂತಿದೆ. ಇದೆಲ್ಲದರ ನಡುವೆಯೂ ಹೈಕೋರ್ಟ್ನ ಆದೇಶದ ಪ್ರಕಾರ ಜಂಟಿ ಸರ್ವೆ ಮಾಡಿ ಮುಗಿಸಬೇಕಿದೆ. ಸರ್ಕಾರ ಈ ಹಿಂದೆ ಇದ್ದ ಜಿಲ್ಲಾಧಿಕಾರಿ ಅಕ್ರಂ ಪಾಷಾ ಹಾಗೂ ಕೋಲಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕುಂಡಲುರನ್ನು ವರ್ಗಾವಣೆ ಮಾಡಿದೆ. ಇದೀಗ ನೂತನ ಡಿಸಿ ಎಂ.ಆರ್.ರವಿ&ಡಿಎಫ್‌ಓ ಸರಿನಾ ನೇತೃತ್ವದಲ್ಲಿ ಸರ್ವೆ ನಡೆಯಲಿದೆ. ಸರ್ವೆ ವೇಳೆ ರಮೇಶ್ ಕುಮಾರ್ ಉಪಸ್ಥಿತರಿರುವ ಸಾಧ್ಯತೆ ಇದೆ. ಹಾಗಾಗಿ ಇಷ್ಟು ವರ್ಷಗಳಲ್ಲಿ ಇಂದು ನಡೆಯಲಿರುವ ಜಂಟಿ ಸರ್ವೆ ಬಹಳ ಮಹತ್ವ ಪಡೆದುಕೊಂಡಿದೆ. ಇದನ್ನೂ ಓದಿ: ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ – ಪೋಕ್ಸೋ ಪ್ರಕರಣ ದಾಖಲು
ಒಟ್ಟಿನಲ್ಲಿ 2 ದಶಕಗಳ ಒತ್ತುವರಿ ಆರೋಪ ಎದುರಿಸುತ್ತಿರುವ ರಮೇಶ್ ಕುಮಾರ್ ಆರೋಪದಿಂದ ಮುಕ್ತರಾಗುತ್ತಾರಾ? ಇಲ್ಲ ಒತ್ತುವರಿ ಸಾಬೀತಾಗಿ ಭೂಮಿಯನ್ನು ಬಿಟ್ಟು ಕೊಡುತ್ತಾರಾ ಅನ್ನೋದು ಇಂದಿನ ಸರ್ವೆ ನಿರ್ಧಾರ ಮಾಡಲಿದೆ. ಇದನ್ನೂ ಓದಿ: ಎಐಸಿಸಿ ನಾಯಕರ ಮುಂದೆ ಸಿಎಂ, ಡಿಸಿಎಂ ಕದನ – ತ್ರಿಮೂರ್ತಿ ಸಭೆಯ ಇನ್‌ಸೈಡ್ ಸ್ಟೋರಿ ಓದಿ