ನವದೆಹಲಿ: 1980ರ ಅರಣ್ಯ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 2ರ ಅಡಿಯಲ್ಲಿ ಕೇಂದ್ರ ಸರ್ಕಾರದ ಪೂರ್ವಾನುಮತಿ ಇಲ್ಲದೆ ಅರಣ್ಯ ಭೂಮಿಯನ್ನು ಗುತ್ತಿಗೆ ನೀಡಲು ಅಥವಾ ಕೃಷಿ ಉದ್ದೇಶಗಳಿಗಾಗಿ ಬಳಸಲು ಸಾಧ್ಯವಿಲ್ಲ. ಕಾನೂನು ಉಲ್ಲಂಘಿಸಿ ನೀಡಲಾದ ಯಾವುದೇ ಗುತ್ತಿಗೆ ಕಾನೂನುಬಾಹಿರವಾಗಿದೆ ಮತ್ತು ಅದನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರಿದ್ದ ಪೀಠವು, ಅರಣ್ಯ ಭೂಮಿಯ ಮೇಲಿನ ಗುತ್ತಿಗೆಯನ್ನು ಮುಂದುವರಿಸಲು ಸಹಕಾರಿ ಸಂಘಕ್ಕೆ ಅವಕಾಶ ನೀಡಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿತು. ಅರಣ್ಯ ಭೂಮಿಯ ಮೇಲೆ ಕೃಷಿ ಉದ್ದೇಶಗಳಿಗಾಗಿ ಗುತ್ತಿಗೆ ನೀಡುವುದೇ ಕಾನೂನುಬಾಹಿರ ಮತ್ತು 1980ರ ಕಾಯ್ದೆಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು. ಹನ್ನೆರಡು ತಿಂಗಳೊಳಗೆ ಸ್ಥಳೀಯ ಮರಗಳು ಮತ್ತು ಸಸ್ಯಗಳನ್ನು ನೆಡುವ ಮೂಲಕ ಭೂಮಿಯನ್ನು ಪುನಃಸ್ಥಾಪಿಸಲು ರಾಜ್ಯ ಅರಣ್ಯ ಇಲಾಖೆಗೆ ನಿರ್ದೇಶನ ನೀಡಿತು. ಇದನ್ನೂ ಓದಿ: ಬಣವೆಗೆ ಆಕಸ್ಮಿಕ ಬೆಂಕಿ – ಲಕ್ಷಾಂತರ ರೂ. ಮೌಲ್ಯದ ಹತ್ತಿ ಬೆಳೆ, ಮೇವು ಭಸ್ಮ
ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಬೆಣಚಿ ಮತ್ತು ತುಮರಿಕೊಪ್ಪ ಗ್ರಾಮಗಳಲ್ಲಿರುವ 134 ಎಕರೆ 6 ಗುಂಟೆ ಜಮೀನಿಗೆ ಸಂಬಂಧಿಸಿದ ವಿವಾದ ಇದಾಗಿದೆ. ರಾಜ್ಯ ಸರ್ಕಾರವು 1976 ಜೂನ್ 30ರಿಂದ ಕೃಷಿ ಉದ್ದೇಶಗಳಿಗಾಗಿ ಹತ್ತು ವರ್ಷಗಳ ಗುತ್ತಿಗೆಯ ಮೇಲೆ ಸಹಕಾರ ಸಂಘಕ್ಕೆ ಭೂಮಿಯನ್ನು ನೀಡಿತ್ತು. ಗುತ್ತಿಗೆ ಅವಧಿಯಲ್ಲಿ, ಸಂಘದ ಸದಸ್ಯರು ಮರಗಳನ್ನು ಕಡಿದು ಭೂಮಿಯನ್ನು ಸಾಗುವಳಿ ಮಾಡಿದರು. ಗುತ್ತಿಗೆ ಅವಧಿ ಮುಗಿದ ನಂತರ, ರಾಜ್ಯವು ಅದನ್ನು ವಿಸ್ತರಿಸಲು ನಿರಾಕರಿಸಿತು ಮತ್ತು 1985 ಮಾರ್ಚ್ 13ರ ಆದೇಶದ ಮೂಲಕ ಗುತ್ತಿಗೆಯನ್ನು ರದ್ದುಗೊಳಿಸಿತು. ಸಹಕಾರಿ ಸಂಘವು 1985 ಮತ್ತು 1987ರಲ್ಲಿ ರಿಟ್ ಅರ್ಜಿಗಳ ಮೂಲಕ ಸರ್ಕಾರದ ನಡೆಯನ್ನು ಪ್ರಶ್ನಿಸಿತು, ಆದರೆ ಹೈಕೋರ್ಟ್ ಅವುಗಳನ್ನು ವಜಾಗೊಳಿಸಿತ್ತು.

