– ಸರ್ಕಾರ ನಿರ್ಲಕ್ಸ್ಯ ತೋರ್ತಿದೆ ಎಂದ ಪರಿಸರವಾದಿ
– ಕ್ರಮ ಕೈಗೊಳ್ತೇವೆ ಎಂದು ಸಿಎಂ ಸ್ಪಷ್ಟನೆ
ಶಿವಮೊಗ್ಗ: ರಿಯಲ್ ಎಸ್ಟೇಟ್ ಉದ್ಯಮ (Real Estate Business) ದ ವ್ಯಾಮೋಹಕ್ಕೆ ಅರಣ್ಯ ಪ್ರದೇಶ (Forest Area) ಒತ್ತುವರಿ ಆಗುವುದರ ಜೊತೆಗೆ ಕೆಲವು ಕಿಡಿಗೇಡಿಗಳು ಅರಣ್ಯಕ್ಕೂ ಬೆಂಕಿ ಇಡುತ್ತಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಅರಣ್ಯ ಪ್ರದೇಶ, ವನ್ಯಜೀವಿಗಳು ಭಸ್ಮವಾಗುತ್ತಿವೆ. ಆದರೂ ಸರ್ಕಾರ ಮಾತ್ರ ಇದರ ವಿರುದ್ಧ ಯಾವ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ.
ಹೌದು. 2016ರಲ್ಲಿ ಆಸ್ಟ್ರೇಲಿಯಾ ಸಿಡ್ನಿ ಕಾಡಿಗೆ ಬೆಂಕಿ ಬಿದ್ದಾಗ ನಮ್ಮೆಲ್ಲರ ಮನ ಮಿಡಿದಿತ್ತು. ಆದರೆ ಈಗ ಅದೇ ಪರಿಸ್ಥಿತಿ ಕರ್ನಾಟಕದ ಪಶ್ಚಿಮ ಘಟ್ಟದ ಮಡಿಲಿನ, ಮಲೆನಾಡು ಜಿಲ್ಲೆ ಶಿವಮೊಗ್ಗದ ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಬಂದೊದಗಿದೆ. ಅರಣ್ಯ ಪ್ರದೇಶದ ಮೇಲೆ ರಿಯಲ್ ಎಸ್ಟೇಟ್ ದಂಧೆಕೋರರ ಕಣ್ಣು ಬಿದ್ದಿದ್ದು, ಮಾನವ ನಿರ್ಮಿತ ಬೆಂಕಿಗೆ ಕಾಡು ಪ್ರಾಣಿಗಳು ಬೆಂದು ಹೋಗ್ತಿವೆ. ಆದರೂ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ. ವನ್ಯ ಜೀವಿಗಳ ಕಣ್ಣೀರು ಭೂಮಿಗೂ ಬೀಳದೇ ಬೆಂಕಿಯಲ್ಲಿ ಆವಿಯಾಗುತ್ತಿದೆ. ಇದನ್ನೂ ಓದಿ: ಆಜಾನ್ ಹೇಳಿಕೆ ವಿರುದ್ಧ ಎಷ್ಟೇ ಪ್ರತಿರೋಧ ಬಂದ್ರೂ ನಾನು ಜನ ಸಾಮಾನ್ಯನ ನೋವು ಹೇಳೋನೆ: ಈಶ್ವರಪ್ಪ
ಕಳೆದ ಹತ್ತು ದಿನಗಳಲ್ಲಿ ಶಿವಮೊಗ್ಗದ ಶೆಟ್ಟಿಹಳ್ಳಿ (ShettyHalli Shivamogga) ಅಭಯಾರಣ್ಯದಲ್ಲಿ 50ಕ್ಕೂ ಅಧಿಕ ಜಾಗಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಇದರಿಂದ ಪಶ್ಚಿಮ ಘಟ್ಟಗಳಲ್ಲಿ ಅಸಂಖ್ಯ ವನ್ಯಜೀವಿಗಳ ನೆಲೆ ನಾಶವಾಗಿದೆ. ಕೆಲ ವನ್ಯ ಜೀವಿಗಳು ದಿಕ್ಕು ತೋಚದೆ ನಾಡಿಗೆ ಲಗ್ಗೆ ಇಟ್ಟಿವೆ. ಅರಣ್ಯ ಇಲಾಖೆಯ ನಿಯಂತ್ರಣಕ್ಕೆ ಸಿಗದ ಮಾನವ ನಿರ್ಮಿತ ಕಾಡಿನ ಬೆಂಕಿ, ಬೇಸಿಗೆಯ ಬಿಸಿಲಿಗೆ ಇನ್ನಷು ಅಬ್ಬರಿಸಿ ಉರಿಯುತ್ತಿದೆ. ಸಿಬ್ಬಂದಿಗೆ ಸರಿಯಾದ ಉಪಕರಣಗಳನ್ನು ನೀಡದೇ, ಮಾನವ ನಿರ್ಮಿತ ಕಾಡಿನ ಬೆಂಕಿ ಕುರಿತು ಸರ್ಕಾರ ನಿಗಾ ವಹಿಸದೇ ಚುನಾವಣೆ ವಿಚಾರದಲ್ಲಿ ಮಗ್ನವಾಗಿದೆ. ಈ ಕೃತ್ಯದ ಇದರ ಹಿಂದೆ ರಿಯಲ್ ಎಸ್ಟೇಟ್‍ನ ದಂಧೆ ಅಡಗಿದೆ ಎಂದು ಪರಿಸರವಾದಿ ಅಖಿಲೇಶ್ ಚಿಪ್ಲಿ ಆರೋಪಿಸಿದ್ದಾರೆ.
ಇನ್ನು ಪಶ್ಚಿಮ ಘಟ್ಟ ಭಾಗದಲ್ಲಿ ಭಾರೀ ಕಾಡ್ಗಿಚ್ಚು ವಿಚಾರ ಸಿಎಂ ಪ್ರತಿಕ್ರಿಯಿಸಿ ಈಗಾಗಲೇ ಡಿಸಿ ಜೊತೆ ಸಭೆ ಮಾಡಿದ್ದು, ಬೆಂಕಿ ಬೀಳದಂತೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಸಾಂಪ್ರದಾಯಿಕ ಕಾರಣದಿಂದ ಅಲ್ಲಲ್ಲಿ ಬೆಂಕಿ ಬೀಳ್ತಿದೆ. ಬೆಂಕಿ ನಂದಿಸುವ ಬದಲು ಬೆಂಕಿ ಬೀಳದಂತೆ ಕ್ರಮ ಕೈಗೊಳ್ಳುತ್ತೇವೆ. ಅರಣ್ಯ ಇಲಾಖೆಗೆ ಬೆಂಕಿ ನಂದಿಸಲು ಹೆಲಿಕಾಪ್ಟರ್ ಬಳಕೆ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದಿದ್ದಾರೆ.
ಒಟ್ಟಾರೆ ಒಂದೆಡೆ ಕಾಡು ಬೆಳೆಸಿ ನಾಡು ಉಳಿಸಿ ಅಂತಾ ಬೊಬ್ಬೆ ಹೊಡೆಯುವ ಸರ್ಕಾರ ತನ್ನ ದಿವ್ಯ ನಿರ್ಲಕ್ಷ್ಯವನ್ನು ಪಕ್ಕಕ್ಕಿಟ್ಟು ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕೆಲಸ ಮಾಡಬೇಕಿದೆ. ಇದನ್ನೂ ಓದಿ: 2024ಕ್ಕೆ ಕಾಂಗ್ರೆಸ್ ಕಚೇರಿಯಲ್ಲಿ ದೀಪ ಹಚ್ಚುವುದಕ್ಕೂ ಯಾರೂ ಸಿಗುವುದಿಲ್ಲ: ಕಾರಜೋಳ