– ಮನೆಗೆ ನುಗ್ಗಿದ ಚಿರತೆಯನ್ನ ಲಾಕ್ ಮಾಡಿದ್ದ ದಂಪತಿ
– ಇಡೀ ಗ್ರಾಮವನ್ನೇ ಬೆಚ್ಚಿ ಬೀಳಿಸಿದ್ದ ಚಿರತೆ
ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಜಿಗಣಿ (Jigani) ಗ್ರಾಮದಲ್ಲಿ ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು (Forest Department Officials )ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದಕ್ಕೂ ಮುನ್ನ ಚಿರತೆ (Leopard) ಮನೆಯ ಒಳಕ್ಕೆ ಬಂದಾಗ ಮನೆಯಲ್ಲೇ ಕೂತಿದ್ದ ವೆಂಕಟೇಶ ಮತ್ತು ವೆಂಕಟ ಲಕ್ಷ್ಮಿ ದಂಪತಿಯ ಸಮಯ ಪ್ರಜ್ಞೆ ದೊಡ್ಡ ಅನಾಹತುವನ್ನ ತಡೆದಿದೆ. ಚಿರತೆ ಮನೆಗೆ ಹೊಕ್ಕುತ್ತಿದ್ದಂತೆ ಭಯಭೀತಿಯಿಂದ ಮನೆಯಿಂದ ಹೊರ ಬಂದು ಬಾಗಿಲು ಲಾಕ್ ಮಾಡಿ ಚಿರತೆಯನ್ನ ಕೂಡಿಹಾಕಿದ್ದಾರೆ. ಸತತ 6 ಗಂಟೆಗಳ ಕಾಲ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಚರಣೆ ಬಳಿಕ ಚಿರತೆಯನ್ನ ಸೆರೆಹಿಡಿದು ಅರಣ್ಯಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ಕುಟುಂಬ ರಾಜ್ಯಾಧ್ಯಕ್ಷ ಸ್ಥಾನದಿಂದ ಮುಕ್ತಿ ಆಗೋವರೆಗೂ ನಾನು ಬಿಜೆಪಿಗೆ ವಾಪಸ್ ಆಗಲ್ಲ – ಯತ್ನಾಳ್ ಶಪಥ
ಏನಾಗಿತ್ತು?
ಇಡೀ ಗ್ರಾಮದ ಜನರ ನಿದ್ದೆಗೆಡಿಸಿದ್ದ ಚಿರತೆ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಜಿಗಣಿ ಗ್ರಾಮಸ್ಥ ವೆಂಕಟೇಶ್ ಎಂಬವರ ಮನೆಗೆ ನುಗ್ಗಿತ್ತು. ದಂಪತಿ ಚಿರತೆಯನ್ನ ಮೆನಯೊಳಗೆ ಕೂಡಿಹಾಕಿದ್ದಾರೆ. ಇದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಬಳಿಕ ಅರಣ್ಯಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಅಷ್ಟರಲ್ಲಾಗಲೇ ಸಾವಿರಾರು ಸಂಖ್ಯೆಯಲ್ಲಿ ಜನ ನೆರೆದಿದ್ದರು. ಚಿರತೆ ಸೆರೆ ಹಿಡಿಯುವ ಅರಣ್ಯ ಇಲಾಖೆ ಕಾರ್ಯಾಚರಣೆಯನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿಯುತ್ತಿದ್ದರು. ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಬೋನ್ ಮತ್ತು ಬಲೆಗಳ ಸಿದ್ಧತೆ ಮಾಡಿಕೊಂಡ ಅರಣ್ಯ ಇಲಾಖೆ ಸಿಬ್ಬಂದಿ, ಬಳಿಕ ಅರಿವಳಿಕೆ ತಜ್ಞರಿಂದ ಮದ್ದು ಕೊಡಿಸಿ ಚಿರತೆಯನ್ನು ಸೆರೆ ಹಿಡಿಯಲಾಯಿತು. ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ಚುರುಕುಗೊಂಡ ಚಂಡಮಾರುತ – ಒಂದು ವಾರ ರಾಜ್ಯದಲ್ಲಿ ಗಾಳಿ ಸಹಿತ ಮಳೆ
ಈ ಕುರಿತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಣೇಶ್ ಮಾತನಾಡಿ, ಜಿಗಣಿಯ ಮನೆಯಲ್ಲಿ ಚಿರತೆ ಸೇರಿಕೊಂಡಿದೆ ಎನ್ನುವ ಮಾಹಿತಿ ಬೆಳಗ್ಗೆ ಬಂತು. ಚಿರತೆ ಕಾರ್ಯಪಡೆ ತಂಡಕ್ಕೆ ಮಾಹಿತಿ ರವಾನೆ ಆಯ್ತು. ಕೂಡಲೇ ಸ್ಥಳಕ್ಕೆ ಹೋಗಿ ಚಿರತೆ ಕಾರ್ಯಾಚರಣೆ ನಡೆಸಲಾಗಿದೆ. ಒಂದೂವರೆ ಕಿಲೋಮೀಟರ್ ಜನವಸತಿ ಪ್ರದೇಶದಿಂದ ಚಿರತೆ ಬಂದಿದೆ. ಮನೆಯಲ್ಲಿ ಜನರು ಇರುವಾಗ್ಲೇ ಹೋಗಿ ಅವಿತುಕೊಂಡಿರೋದು ಆಶ್ಚರ್ಯಕರ. ಜನನಿಬಿಡ ಪ್ರದೇಶದಲ್ಲಿ ಚಿರತೆ ಬರೋದು ನಿಜಕ್ಕೂ ಆಶ್ಚರ್ಯ. ಇದೊಂದು ಅರಣ್ಯ ಇಲಾಖೆಗೆ ಬಿಗ್ ಟಾಸ್ಕ್ ಆಗಿತ್ತು. ಚಿರತೆ ಮನೆಯೊಳಗೆ ಹೋದ ಕೂಡಲೇ ಸಮಯಪ್ರಜ್ಞೆಯಿಂದ ಬಾಗಿಲು ಹಾಕಿದ್ದಾರೆ. ಮನೆಯಲ್ಲಿದ್ದವರ ಸಮಯ ಪ್ರಜ್ಞೆ ಮೆಚ್ಚಬೇಕಿದೆ. ಕಿರಿದಾದ ರೂಮಿನೊಳಗೆ ಮೊಬೈಲ್ ಕ್ಯಾಮರಾ ಬಳಸಿ ಚಿರತೆ ಇರೋದು ಪತ್ತೆಹಚ್ಚಲಾಯಿತು ಎಂದು ತಿಳಿಸಿದ್ದಾರೆ.
ಬಳಿಕ ಡಾ.ಕಿರಣ್ ನೇತೃತ್ವದಲ್ಲಿ ಚಿರತೆಗೆ ಅರವಳಿಕೆ ನೀಡಲಾಯಿತು. ಒಂದು ಅರವಳಿಕೆ ಡಾಟ್ ಮಾಡಿದಾಗ ಅದು ಮೈಮೇಲೆ ಚಿರತೆ ಎರಗಲು ಬಂತು. ಮತ್ತೆ ಡೋಸ್ ಹೆಚ್ಚಳ ಮಾಡಿ ಮತ್ತೊಂದು ಅರವಳಿಕೆ ನೀಡಲಾಯಿತು. ಒಟ್ಟು ಎರಡು ಅರವಳಿಕೆ ಇಂಜೆಕ್ಷನ್ ಡಾಟ್ ಮಾಡಲಾಗಿದೆ. ಪ್ರಜ್ಞೆ ತಪ್ಪಿದ ನಂತರ ಅದರ ಆರೋಗ್ಯ ಪರಿಶೀಲನೆ ಮಾಡಲಾಗಿದೆ. ಆರೇಳು ವರ್ಷದ ಹೆಣ್ಣು ಚಿರತೆ ಇದಾಗಿದೆ. ಆ ಚಿರತೆಯನ್ನ ಕೇಜ್ ಮುಖಾಂತರ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಶಿಫ್ಟ್ ಮಾಡಲಾಯಿತು. ಅಲ್ಲಿ ಮತ್ತೆ ಅದರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.