ಮೈಸೂರು: ಬೇಟೆಗೆ ಹಾಕಿದ್ದ ಉರುಳಿಗೆ ಸಿಲುಕಿ ನರಳಾಡುತ್ತಿದ್ದ ಕಾಡುಪ್ರಾಣಿಗಳ ಜೀವವನ್ನು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟು ಉಳಿಸಿದ್ದಾರೆ.
ಅರಣ್ಯ ಪ್ರದೇಶದಲ್ಲಿ ದುಷ್ಕರ್ಮಿಗಳು ಕಾಡು ಪ್ರಾಣಿಗಳ ಬೇಟೆಗೆಂದು ಹಾಕಿದ್ದ ಉರುಳಿಗೆ ಸಿಲುಕಿ ನರಳುತ್ತಿದ್ದ ಹುಲಿ ಹಾಗೂ ಕರಡಿಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ. ಜಿಲ್ಲೆ ಹುಣಸೂರು ತಾಲೂಕಿನ ಶೆಟ್ಟಹಳ್ಳಿ ಅರಣ್ಯ ಪ್ರದೇಶದಲ್ಲಿ ಕಾಡುಹಂದಿ ಬೇಟೆಗೆ ಹಾಕಿದ್ದ ಉರುಳಿಗೆ 2.5 ವರ್ಷದ ಗಂಡು ಹುಲಿ ಸಿಲುಕಿ ಒದ್ದಾಡುತ್ತಿತ್ತು. ಕುತ್ತಿಗೆಗೆ ಉರುಳು ಸಿಲುಕಿದ ಪರಿಣಾಮ ಘರ್ಜಿಸುತ್ತಿದ್ದ ಹುಲಿ ಪ್ರಾಣ ಉಳಿಸಿಕೊಳ್ಳಲು ನರಳಾಡುತ್ತಿತ್ತು. ಈ ವೇಳೆ ಹುಲಿಯನ್ನು ಗಮನಿಸಿದ ಅರಣ್ಯ ಇಲಾಖೆಯ ಗಸ್ತು ಸಿಬ್ಬಂದಿ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.
Advertisement
Advertisement
ತಕ್ಷಣ ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಹುಲಿಗೆ ಅರವಳಿಕೆ ಚುಚ್ಚುಮದ್ದು ನೀಡಿ ಉರುಳಿನಿಂದ ರಕ್ಷಣೆ ಮಾಡಿ, ಪ್ರಾಥಮಿಕ ಚಿಕಿತ್ಸೆ ನೀಡಲು ಮೈಸೂರು ಮೃಗಾಲಯಕ್ಕೆ ಹುಲಿಯನ್ನು ರವಾನಿಸಿದ್ದಾರೆ. ಸದ್ಯ ಮೈಸೂರಿನ ಹೊರವಲಯದ ಕೂರ್ಗಳ್ಳಿ ಪ್ರಾಣಿ ಪುರ್ನವಸತಿ ಕೇಂದ್ರದಲ್ಲಿ ಹುಲಿಗೆ ಆರೈಕೆಯನ್ನು ಮಾಡಲಾಗುತ್ತಿದೆ.
Advertisement
Advertisement
ಒಂದೆಡೆ ಹುಲಿಯಾದರೇ ಇನ್ನೊಂದೆಡೆ ಉರುಳಿಗೆ ಸಿಲುಕಿ ನರಳುತ್ತಿದ್ದ ಸುಮಾರು ಆರು ವರ್ಷದ ಗಂಡು ಕರಡಿಯನ್ನು ಅರಣ್ಯ ಇಲಾಖೆಯವರು ರಕ್ಷಿಸಿದ್ದಾರೆ. ಜಿಲ್ಲೆ ಹೆಚ್.ಡಿ ಕೋಟೆ ತಾಲೂಕಿನ ನುಗು ಜಲಾಶಯದ ಬಳಿಯ ಹೊಸ ಬಿರುವಾಳು ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದ್ದು, ವೈದ್ಯ ನಾಗರಾಜು ಹಾಗೂ ಅರಣ್ಯ ಸಿಬ್ಬಂದಿ ಅಕ್ರಂಪಾಷರಿಂದ ಕರಡಿ ರಕ್ಷಣೆ ಮಾಡಿದ್ದಾರೆ. ಗಾಯಗೊಂಡಿದ್ದ ಕರಡಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಮತ್ತೆ ಯಡಿಯಾಳ ಅರಣ್ಯಕ್ಕೆ ಬಿಟ್ಟಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv