ಚಾಮರಾಜನಗರ: ಸುರಕ್ಷಿತ ವಾಸ ಸ್ಥಾನ ಅರಸಿ ನಾಗರಹೊಳೆ ಕಾಡಿನಿಂದ ಸುಮಾರು 80 ಕಿ.ಮೀ ದೂರಕ್ಕೆ ವಲಸೆ ಬಂದು, ಕಾಡಂಚಿನ ಗ್ರಾಮಗಳಲ್ಲಿ ಉಪಟಳ ನೀಡುವ ಮೂಲಕ 16 ಹಸು ಹಾಗೂ ಇಬ್ಬರ ಮೇಲೆ ದಾಳಿ ನಡೆಸಿ ಕೊಂದು ಹಾಕಿ, ಸೆರೆ ಸಿಕ್ಕಿದ್ದ ಹುಲಿಯನ್ನು ತಳಿ ಅಭಿವೃದ್ಧಿಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ಸೆರೆಸಿಕ್ಕಿರುವ ಹುಲಿ ಆರೋಗ್ಯದಿಂದ ಇರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮಹತ್ವದ ನಿಲುವು ತೆಗೆದುಕೊಂಡಿದ್ದು, ಶೀಘ್ರದಲ್ಲೇ ಹಂಪಿ ಮೃಗಾಲಯಕ್ಕೆ ಹುಲಿಯನ್ನು ಸ್ಥಳಾಂತರಿಸುವ ಸಾಧ್ಯತೆ ಇದೆ.
Advertisement
Advertisement
ರಾಜ್ಯದಲ್ಲಿ ಮೈಸೂರು ಮೃಗಾಲಯ ಸೇರಿದಂತೆ 9 ಮೃಗಾಲಯಗಳಿದ್ದು, ಬಹುತೇಕ ಎಲ್ಲಾ ಮೃಗಾಲಯಗಳಲ್ಲೂ ಇರುವ ಹುಲಿಗಳು ಒಂದೇ ರಕ್ತದ ಗುಂಪಿಗೆ ಸೇರಿವೆ. ಮೃಗಾಲಯಗಳಲ್ಲೇ ಜನಿಸಿರುವ ಹುಲಿಗಳನ್ನು ಬೇರೆ ಬೇರೆ ಮೃಗಾಲಯಗಳಿಗೆ ಸ್ಥಳಾಂತರ ಮಾಡುವ ಪದ್ಧತಿ ಮೊದಲಿನಿಂದಲೂ ಇರುವುದರಿಂದ ಸಾಮಾನ್ಯವಾಗಿ ಎಲ್ಲಾ ಮೃಗಾಲಯಗಳಲ್ಲಿರುವ ಹುಲಿಗಳು ರಕ್ತ ಸಂಬಂಧಿಗಳೇ ಆಗಿವೆ.
Advertisement
ಈ ಹಿನ್ನೆಲೆಯಲ್ಲಿ ಹೊಸ ರಕ್ತದ ಹುಲಿಗಳ ಅವಶ್ಯಕತೆ ಮೃಗಾಲಯಕ್ಕೆ ಇರುವುದರಿಂದ, ಬಂಡೀಪುರದಲ್ಲಿ ಸೆರೆ ಸಿಕ್ಕಿದ ಹುಲಿಯನ್ನು ತಳಿ ಅಭಿವೃದ್ಧಿಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದ್ದು, ಮೈಸೂರು ಅಥವಾ ಹಂಪಿ ಮೃಗಾಲಯದಲ್ಲಿ ಈ ಹುಲಿಗೆ ಜೋಡಿಯಾಗಿ ಹೆಣ್ಣು ಹುಲಿಯೊಂದನ್ನು ಬಿಡಲು ಉದ್ದೇಶಿಸಲಾಗಿದೆ.
Advertisement
ಆರೋಗ್ಯವಂತ ಹುಲಿ:
ಬಂಡೀಪುರದ ಕಾಡಂಚಿನ ಗ್ರಾಮಗಳಾದ ಚೌಡಳ್ಳಿ, ಹುಂಡಿಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಉಪಟಳ ನೀಡಿ ಭಯದ ವಾತಾವರಣ ಸೃಷ್ಟಿಸಿದ್ದ ಹುಲಿ ಇಬ್ಬರ ಮೇಲೆರಗಿ ಕೊಂದು ಹಾಕಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ಚುರುಕುಗೊಳಿಸಿ ಅ. 13ರಂದು ಮಧ್ಯಾಹ್ನ ಅರವಳಿಕೆ ಚುಚ್ಚುಮದ್ದು ನೀಡಿ ಹುಲಿಯನ್ನು ಸೆರೆ ಹಿಡಿಯಲಾಗಿತ್ತು. ದೇಶದ ಇತಿಹಾಸದಲ್ಲೇ ಅರಣ್ಯ ಪ್ರದೇಶದಲ್ಲಿ ಸೂಕ್ಷ್ಮವಾಗಿ ಕಾರ್ಯಾಚರಣೆ ನಡೆಸಿ, ಸುರಕ್ಷಿತವಾಗಿ ಹುಲಿಯನ್ನು ಸೆರೆ ಹಿಡಿಯಲಾಗಿತ್ತು. ಸೆರೆ ಸಿಕ್ಕಿದ ಹುಲಿ ಕೇವಲ 7 ವರ್ಷದ್ದಾಗಿದ್ದು, ಆರೋಗ್ಯದಿಂದಿತ್ತು. ಈ ಹಿನ್ನೆಲೆಯಲ್ಲಿ ಮೈಸೂರಿನ ಕೂರ್ಗಳ್ಳಿಯಲ್ಲಿರುವ ಮೃಗಾಲಯದ ಪ್ರಾಣಿಗಳ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿ ಆರೈಕೆ ಮಾಡಲಾಗುತ್ತಿತ್ತು.
ಇದೀಗ ಸೆರೆ ಸಿಕ್ಕಿರುವ ಹುಲಿಯನ್ನು ತಳಿ ಅಭಿವೃದ್ಧಿಗೆ ಬಳಸಿಕೊಳ್ಳಲು ಕಳೆದ ವಾರವಷ್ಟೆ ಹಿರಿಯ ಅಧಿಕಾರಿಗಳು ನಿರ್ಧರಿಸಿದ್ದಾರೆ. ವಿವಿಧೆಡೆ ಸೆರೆ ಸಿಕ್ಕಿರುವ ಹುಲಿಗಳನ್ನು ಮೃಗಾಲಯದಲ್ಲಿ ಪ್ರವಾಸಿಗರ ವೀಕ್ಷಣೆಗೆ ಬಳಸಿಕೊಳ್ಳುವುದಿಲ್ಲ. ಅರಣ್ಯದಲ್ಲೇ ಹುಟ್ಟಿ ಬೆಳೆದಿರುವ ಹುಲಿಗಳು ಹೆಚ್ಚು ಶಕ್ತಿಯುತವಾಗಿದ್ದು, ಬೇಟೆಯಾಡಲು ತೀವ್ರ ಕಸರತ್ತು ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಸೆರೆ ಹಿಡಿದು ತರುವ ಹುಲಿಗಳನ್ನು ಪ್ರವಾಸಿಗರ ವೀಕ್ಷಣೆಗೆ ಅವಕಾಶ ನೀಡುವುದಿಲ್ಲ. ಇದರಿಂದಾಗಿ ಎಲ್ಲಾ ಮೃಗಾಲಯಗಳಲ್ಲೂ ಇರುವ ಹುಲಿಗಳು ಒಂದೇ ಕುಟುಂಬದಲ್ಲಿ ಜನಿಸಿದ ಹುಲಿಗಳೇ ಆಗಿರುತ್ತವೆ. ಇದನ್ನು ಮನಗಂಡು ಹೊಸ ರಕ್ತದ ಹುಲಿಗಳ ಜನನಕ್ಕೆ ನಾಂದಿ ಹಾಡಲು ಕ್ರಮ ಕೈಗೊಳ್ಳಲಾಗಿದೆ.
ಹಿಂದೆಯೂ ಕೂಡ ತಳಿ ಅಭಿವೃದ್ಧಿಗೆ ಹುಲಿಯ ಬಳಕೆ:
ತಳಿ ಅಭಿವೃದ್ಧಿಗಾಗಿ ಕಾಡಿನಿಂದ ಸೆರೆ ಹಿಡಿದು ತಂದ ಹುಲಿ ಬಳಸಿಕೊಳ್ಳುತ್ತಿರುವುದು ಇದು ಎರಡನೇ ಬಾರಿ. ಸುಮಾರು 20 ವರ್ಷಗಳ ಹಿಂದೆ ನಾಗರಹೊಳೆ ಅರಣ್ಯದ ಕಾಡಂಚಿನ ಗ್ರಾಮಗಳಲ್ಲಿ ಉಪಟಳ ನೀಡಿತ್ತಿದ್ದ ಹುಲಿಯನ್ನು ಸೆರೆ ಹಿಡಿಯಲಾಗಿತ್ತು. ಈ ಹುಲಿಯನ್ನು ತಳಿ ಅಭಿವೃದ್ಧಿಗೆ ಬಳಸಿಕೊಳ್ಳಲಾಗಿತ್ತು. ಬಹು ವರ್ಷಗಳ ನಂತರ ಇದೀಗ ವಲಸೆ ಬಂದು ಸೆರೆ ಸಿಕ್ಕ ಹುಲಿಯನ್ನು ತಳಿ ಅಭಿವೃದ್ಧಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಬಳಸಿಕೊಳ್ಳುತ್ತಿದ್ದಾರೆ.