ಮಡಿಕೇರಿ: ಪ್ರಕೃತಿಯ ಸೌಂದರ್ಯದ ನೆಲೆವೀಡು, ಪ್ರವಾಸಿಗರ ಸ್ವರ್ಗ ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಕುಶಾಲನಗರ ಸಮೀಪದ ನಿಸರ್ಗಧಾಮಕ್ಕೆ ಹೊಸ ಲುಕ್ ಬಂದಿದ್ದು, ಕಾವೇರಿ ನದಿ ತಟದಲ್ಲಿರೋ ನಿಸರ್ಗಧಾಮ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.
ಹೊಸದಾಗಿ ಸ್ಥಾಪಿಸಲ್ಪಟ್ಟಿರುವ ಕೊಡಗಿನ ಸಾಂಪ್ರದಾಯಿಕ ನೃತ್ಯ ಪ್ರಕಾರಗಳ ಪುತ್ಥಳಿಗಳು ನಿಸರ್ಗಧಾಮದ ಮೆರುಗು ಹೆಚ್ಚಿಸಿವೆ. ಹೊಸತನದೊಂದಿಗೆ ನಿಸರ್ಗಧಾಮ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ. ಹಚ್ಚ ಹಸಿರ ಬಿದಿರುಗಳು, ಮರಗಳ ಮೇಲಿನ ಪುಟ್ಟ ಪಟ್ಟ ಗುಡಿಸಲುಗಳು, ತಂಪಾದ ಗಾಳಿ, ಹಚ್ಚ ಹಸಿರ ಬಿದಿರ ನಡುವೆ ಸಾಗುವ ಅಂಕು ಡೊಂಕಾದ ದಾರಿ. ಪ್ರಣಯ ಪಕ್ಷಿಗಳು ರೆಕ್ಕೆ ಬಿಚ್ಚಿ ಹಾರಾಡೋಕೆ ಹೇಳಿ ಮಾಡಿಸಿದ ವೆದರ್, ಅದಕ್ಕೆ ತಕ್ಕಂತಿರುವ ಹಚ್ಚ ಹಸಿರಿನಲ್ಲಿ ವಿಶಿಷ್ಟ ಸಂಸ್ಕೃತಿ, ಸಂಪ್ರದಾಯಗಳ ಮೂಲಕ ಹೆಸರುವಾಸಿಯಾದವರು ಕೊಡವ ಜನರು. ರಾಜ್ಯ ಮಾತ್ರವಲ್ಲ ದೇಶ ವಿದೇಶದಲ್ಲಿ ಹೆಸರಾಗಿರುವ ಕೊಡವ ಸಂಸ್ಕೃತಿಯನ್ನು ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಈ ಹೊಸ ಪ್ರಯೋಗ ಮಾಡಿದೆ.
Advertisement
Advertisement
ಮೈಸೂರು-ಮಡಿಕೇರಿ ಹೆದ್ದಾರಿಯಲ್ಲಿರುವ ಕಾವೇರಿ ನಿಸರ್ಗಧಾಮದಲ್ಲಿ ಅರಣ್ಯ ಇಲಾಖೆ ಕೊಡವ ಸಂಪ್ರದಾಯ ಬಿಂಬಿಸುವ ಕಲಾಕೃತಿಗಳನ್ನ ಮೂಡಿಸಿದೆ. ಹುಬ್ಬಳ್ಳಿ ಮೂಲದ 30 ಮಂದಿ ಕಲಾವಿದರು ಈ ಅದ್ಭುತ ಕಲೆ ಸೃಷ್ಟಿ ಮಾಡಿದ್ದು. ಈ ಕಲಾಕೃತಿಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
Advertisement
ಕೊಡವ ಸಾಂಪ್ರದಾಯಿಕ ನೃತ್ಯ ಮತ್ತು ಗೌಡ ಜನಾಂಗದ ಕೋಲಾಟ, ಆದಿವಾಸಿಗಳ ದಿನಚರಿ ಕುರಿತ ನೈಜವಾಗಿ ಕಾಣುವ ರೀತಿಯಲ್ಲಿ ಆಕೃತಿಗಳನ್ನು ಮಾಡಲಾಗಿದೆ. ಹರೀಶ್ ತಂಡ, ಟೆಕ್ನಿಕಲ್ ಮತ್ತು ಕ್ಲೇ ಮೂಲಕ ಈ ಅದ್ಭುತ ಕಲಾಕೃತಿಗಳನ್ನ ಸೃಷ್ಟಿಸಿದ್ದಾರೆ. ಸರ್ಕಾರದಿಂದ ಸಿಕ್ಕ ಸೂಕ್ತ ಅನುದಾನ, ಅರಣ್ಯ ಇಲಾಖೆಯ ಯೋಜನೆಯಿಂದಾಗಿ ನಿಸರ್ಗಧಾಮ ಈಗ ಅಪಟ್ಟ ಕೊಡವ ಸಾಂಸ್ಕೃತಿಕ ನಾಡಾಗಿ ರೂಪುಗೊಂಡಿದೆ. ಮೊದಲೇ ಪ್ರವಾಸಿ ಕೇಂದ್ರ ಬಿಂದುವಾಗಿರುವ ಜಿಲ್ಲೆಯಲ್ಲಿ ಈ ತಾಣ ಈಗ ಜನರ ಆಕರ್ಷಕ ತಾಣಗಳಲ್ಲಿ ಒಂದಾಗಿದೆ ಎಂದು ಅರಣ್ಯಧಿಕಾರಿ ವಿಲಾಶ್ ಹೇಳಿದ್ದಾರೆ.
Advertisement
ಬಿದಿರ ಮೆಳೆಗಳ ನಡುವೆ ಸಾಗಿ ತೂಗುಯ್ಯಾಲೆಯಲ್ಲಿ ಕಾವೇರಿ ನದಿ ದಾಟಿ, ಹೊಸ ಪ್ರಾಕೃತಿಕ ಪ್ರಪಂಚ ಎಂಟ್ರಿಯಾಗೋ ಪ್ರವಾಸಿಗರು ನಿಸರ್ಗಧಾಮದ ಹೊಸ ನಿಸರ್ಗ ವೈಭವವನ್ನು ಕಣ್ತುಂಬಿಕೊಂಡು, ಕಾಲ ಕಳೆದು ಎಂಜಾಯ್ ಮಾಡುತ್ತಿದ್ದಾರೆ. ನಿಸರ್ಗಧಾಮ ಇದೀಗ ತನ್ನ ಹೆಸರಿಗೆ ತಕ್ಕಂತೆ ನಿಸರ್ಗವನ್ನು ಹೊದ್ದು, ಪ್ರವಾಸಿಗರನ್ನು ಕೈಬೀಸಿ ತನ್ನತ್ತ ಕರೆಯುತ್ತಿದೆ. ನಿಸರ್ಗಧಾಮಕ್ಕೆ ಹೊಸ ರೂಪ ನೀಡಿದ ಅರಣ್ಯ ಇಲಾಖೆ ಕಾರ್ಯಕ್ಕೆ ಪ್ರವಾಸಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದು, ನಿಸರ್ಗಧಾಮದತ್ತ ಬರುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಾ ಇದೆ.