ಕೊಪ್ಪಳ: ಇಂದು ದೇಶವೆ ಬಣ್ಣ ಬಣ್ಣದ ಹೋಳಿ ಹಬ್ಬದಲ್ಲಿ ಭಾಗಿಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ವಿದೇಶಿ ಪ್ರವಾಸಿಗರು ಅತ್ಯಂತ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಿದರು.
Advertisement
ವಿದೇಶಿ ಪ್ರವಾಸಿಗರ ಮೋಜಿನ ತಾಣವೆಂದೇ ಕರೆಯಲ್ಪಡುವ ಈ ಪ್ರದೇಶದಲ್ಲಿ ಹೋಳಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ವಿದೇಶಿ ಪ್ರವಾಸಿಗರು ಹೋಳಿ ಹಬ್ಬದ ದಿನದಂದು ರಂಗುರಂಗಿನ ಬಣ್ಣಗಳೊಂದಿಗೆ ಅತಿ ಉತ್ಸಾಹ ಹಾಗೂ ಸಡಗರ ಸಂಭ್ರಮದೊಂದಿಗೆ ಹೋಳಿ ಆಚರಿಸಿದರು. ಪರಸ್ಪರ ಬಣ್ಣ ಎರಚುತ್ತಾ ಕೇಕೆ ಹಾಕುತ್ತಾ ಸ್ಥಳೀಯರೊಂದಿಗೆ ಬಣ್ಣಗಳಲ್ಲಿ ಮಿಂದೆದ್ದರು.
Advertisement
Advertisement
ತಮ್ಮ ವಿದೇಶಿ ಗೆಳೆಯರಿಗೆ ಬೇಡವೆಂದರೂ ಬಣ್ಣ ಹಾಕುತ್ತಾ ಹಾಡಿ ನಲಿದಾಡಿದರು. ನಂತರ ನಡೆದ ಮೆರವಣಿಗೆಯಲ್ಲಿ ತಾಳಕ್ಕೆ ತಕ್ಕಂತೆ ಹಾಡಿ ಕುಣಿದಾಡಿದ ವಿದೇಶಿ ಪ್ರವಾಸಿಗರು, ತಾವೇನೂ ಕಮ್ಮಿಯಿಲ್ಲವೆಂದು ಸಾಬೀತುಪಡಿಸಿದರು. ಸುಮಾರು ನಾಲ್ಕು ಗಂಟೆಗಳ ಕಾಲ ಬಣ್ಣಗಳೊಂದಿಗೆ ಆಟವಾಡಿದ ವಿದೇಶಿಗರು ತಮ್ಮತನವನ್ನು ಮರೆತಿದ್ದು ವಿಶೇಷವಾಗಿತ್ತು. ಇದೇ ಸಂದರ್ಭದಲ್ಲಿ ಮಾತನಾಡಿದ ಕೆಲ ವಿದೇಶಿ ಪ್ರವಾಸಿಗರು, ಇದೊಂದು ಅಪರೂಪದ ಹಬ್ಬವಾಗಿದ್ದು, ನಮಗೆ ಸಾಕಷ್ಟು ಸಂತೋಷ ತಂದಿದೆ ಎಂದರು. ಸ್ಥಳೀಯರು ಮಾತನಾಡಿ ಭಾರತೀಯ ಸಂಸ್ಕೃತಿಯನ್ನು ವಿದೇಶಿಗರಿಗೆ ತಿಳಿ ಹೇಳಲು ಈ ಹಬ್ಬ ಬಹಳ ಅನುಕೂಲವಾಗಿದೆ ಎಂದು ತಿಳಿಸಿದರು.
Advertisement
ಈ ಮಧ್ಯೆ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಭಾವೈಕ್ಯೆತೆಯ ಜೊತೆಗೆ ವಿವಿಧ ಬಣ್ಣದ ಚಿತ್ತಾರ ಬಿಡಿಸುವ ಹೋಳಿ ಹಬ್ಬ, ವಿದೇಶಿ ಪ್ರವಾಸಿಗರಿಗೆ ಹೊಸದೊಂದು ಭಾವನೆ ಬೆಳೆಸುತ್ತಿದೆ ಎಂಬುದಕ್ಕೆ ವಿರುಪಾಪುರ ಗಡ್ಡೆಯ ಈ ವಿದೇಶಿಗರು ಸಾಕ್ಷಿಯಾದರು.