ಕರ್ನಾಟಕದಲ್ಲಿ ಬಂಡವಾಳ ಹೂಡಲು ಉತ್ಸುಕರಾಗಿರುವ ವಿದೇಶಿ ಕಂಪನಿಗಳು

Public TV
2 Min Read
CM BSY FOREIGN 4

ದಾವೋಸ್ : ಜಾಗತಿಕ ಭದ್ರತೆ ಮತ್ತು ಏರೋಸ್ಪೇಸ್ ಸಂಸ್ಥೆಯಾದ ಲಾಕ್‍ಹೀಡ್ ಮಾರ್ಟಿನ್ ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ರಿಚರ್ಡ್ ಅಂಬ್ರೋಸ್ ಅವರು ಕರ್ನಾಟಕ ಪೆವಿಲಿಯನ್‍ಗೆ ಭೇಟಿ ನೀಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದರು. ಶೀಘ್ರದಲ್ಲೇ ಬೆಂಗಳೂರಿಗೆ ಭೇಟಿ ನೀಡಿ ಕರ್ನಾಟಕದಲ್ಲಿ ಹೂಡಿಕೆಯ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳ ಸಾಧ್ಯತೆಗಳನ್ನು ಪರಿಶೀಲಿಸುವುದಾಗಿ ರಿಚರ್ಡ್ ಅಂಬ್ರೋಸ್ ತಿಳಿಸಿದರು.

ಕರ್ನಾಟಕದಲ್ಲಿ ಏರೋಸ್ಪೇಸ್ ಮತ್ತು ಜಾಗತಿಕ ಭದ್ರತಾ ವ್ಯವಸ್ಥೆಯ ಕುರಿತು ವಿವರಿಸಿದ ಮುಖ್ಯಮಂತ್ರಿಗಳು, ಫಾರ್ಚೂನ್ 500 ಕಂಪನಿಗಳ ಪೈಕಿ 400 ಕಂಪನಿಗಳು ಕರ್ನಾಟಕದಲ್ಲಿ ಈಗಾಗಲೇ ಅಸ್ತಿತ್ವದಲ್ಲಿದ್ದು, ಕರ್ನಾಟಕದಲ್ಲಿ ಲಾಕ್‍ಹೀಡ್ ಮಾರ್ಟಿನ್ ಕಂಪನಿ ಹೂಡಿಕೆ ಮಾಡಲು ಸೂಕ್ತ ವಾತಾವರಣ ಇರುವುದಾಗಿ ತಿಳಿಸಿದರು.

CM BSY FOREIGN 6

ಏರೋಸ್ಪೇಸ್ ಕೈಗಾರಿಕೆಗಳು ಮತ್ತು ಮಲ್ಟಿಕೋರ್ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಅತ್ಯುತ್ತಮ ಪರಿಸರವನ್ನು ಕರ್ನಾಟಕ ಹೊಂದಿದೆ. ರಾಜ್ಯದಲ್ಲಿ ಹೂಡಿಕೆ ಮಾಡುವ ಮೂಲಕ ಲಾಕ್‍ಹೀಡ್ ಮಾರ್ಟಿನ್ ಕಂಪನಿ ರಾಜ್ಯದಲ್ಲಿನ ಕೈಗಾರಿಕಾ ಸಾಮರ್ಥ್ಯವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ತಿಳಿಸಿದರು.

ಜಾಗತಿಕ ಆಟೋಮೇಟಿವ್ ಭಾಗಗಳ ತಯಾರಕ ಕಂಪನಿ ಡೆನ್ಸೊ, ಕರ್ನಾಟಕದ ನಿಯೋಗದೊಂದಿಗೆ ಚರ್ಚಿಸಿತು. ದೆಹಲಿಯಲ್ಲಿ ತಮ್ಮ ಕಂಪನಿಯು ಶ್ರೇಷ್ಠತಾ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದ್ದು, ಶೀಘ್ರದಲ್ಲಿಯೇ ಬೆಂಗಳೂರಿಗೆ ಭೇಟಿ ನೀಡಿ ದಕ್ಷಿಣ ಭಾರತದಲ್ಲಿ ತಮ್ಮ ಸಂಸ್ಥೆಯನ್ನು ವಿಸ್ತರಿಸುವ ಸಾಧ್ಯತೆಯನ್ನು ಪರಿಶೀಲಿಸುವುದಾಗಿ ಸಂಸ್ಥೆಯ ಉಪಾಧ್ಯಕ್ಷ ಹಿರೋಯುಕಿ ವಕಬಾಸ್ಯಿ ತಿಳಿಸಿದರು. ಡೆನ್ಸೊ ಸಂಸ್ಥೆಯು ಕಿರ್ಲೋಸ್ಕರ್ ಸಹಯೋಗದೊಂದಿಗೆ ನೆಲಮಂಗಲದಲ್ಲಿ 429 ನೌಕರರುಳ್ಳ ಘಟಕವನ್ನು ಹೊಂದಿದೆ.

CM BSY FOREIGN 7

ಮಧುಮೇಹಿಗಳಿಗೆ ಸಿಹಿ ಸುದ್ದಿ : ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸುಲಭ ದರದಲ್ಲಿ ಆರೋಗ್ಯ ಇಲಾಖೆಯ ಮುಖಾಂತರ ಔಷಧಿಯನ್ನು ಸರಬರಾಜು ಮಾಡಲು ಡ್ಯಾನಿಷ್‍ನ ಪ್ರಸಿದ್ಧ ಔಷಧ ತಯಾರಿಕಾ ಕಂಪನಿಯಾದ ನೋವೋ ನಾರ್ಡಿಸ್ಕ್ ಮುಂದಾಗಿದೆ.

ಕರ್ನಾಟಕ ಸರ್ಕಾರದೊಂದಿಗೆ ಕೈಜೋಡಿಸುವ ಆಸಕ್ತಿ ವ್ಯಕ್ತಪಡಿಸಿದ ನೋವೋ ನಾರ್ಡಿಸ್ಕ್ ಅಧ್ಯಕ್ಷ ಮತ್ತು ಸಿಇಒ ಫ್ರುಯರ್ ಗಾರ್ಡ್ ಜಾರ್ಜೆನ್ಸನ್ ಮಧುಮೇಹದ ವಿವಿಧ ಹಂತಗಳಲ್ಲಿರುವ ರೋಗಿಗಳಿಗೆ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಿರುವುದಾಗಿ ತಿಳಿಸಿದರು. ಸುಲಭ ದರದಲ್ಲಿ ಔಷಧಗಳನ್ನು ಸರಬರಾಜು ಮಾಡುವುದಲ್ಲದೆ, ಕಾಯಿಲೆಯನ್ನು ನಿಭಾಯಿಸಲು ಹಾಗೂ ಅದನ್ನು ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಸರ್ಕಾರದೊಂದಿಗೆ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

CM BSY FOREIGN 11

ಮಧುಮೇಹ ಕಾಯಿಲೆಯನ್ನು ನಿಯಂತ್ರಿಸಲು ಕಂಪನಿಯ ಸಹಕಾರವನ್ನು ಪಡೆಯಲು ಸಿದ್ಧವಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಅವರು ಮಾತನಾಡಿ, ಔಷಧಗಳನ್ನು ಕೊಳ್ಳಲು ಅಶಕ್ತರಾಗಿರುವ ಬಡ ಮಧುಮೇಹಿ ರೋಗಿಗಳಿಗೆ ಸಹಾಯ ಮಾಡಲು ಸಂಸ್ಥೆಯ ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುವುದೆಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *