ಬಾಗಲಕೋಟೆ: ಬಲವಂತವಾಗಿ ಬಸ್‌ನಿಂದ ಕೆಳಗಿಳಿಸಿ, ಕೇಸರಿ ಬಣ್ಣ ಬಳಿದು ಹಾರ ಹಾಕಿ, ಜೈ ಮಹಾರಾಷ್ಟ್ರ ಹೇಳುವಂತೆ ಒತ್ತಾಯಿಸಿದರು ಎಂದು ಇಳಕಲ್ ಬಸ್ ಚಾಲಕ ಹಾಗೂ ನಿರ್ವಾಹಕ ಬೇಸರ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ಡಿಪೋದ ಕೆಎಸ್‌ಆರ್‌ಟಿಸಿ ಬಸ್‌ನ್ನು ಮಹಾರಾಷ್ಟ್ರ ಪುಂಡರು ತಡೆಹಿಡಿದು, ಕಂಡಕ್ಟರ್ ಹಾಗೂ ಚಾಲಕನನ್ನು ಬಲವಂತವಾಗಿ ಕೆಳಗಿಳಿಸಿ ಕೇಸರಿ ಬಣ್ಣ ಬಳಿದು, ಜೈ ಮಹಾರಾಷ್ಟ್ರ ಎನ್ನುವಂತೆ ಅವಮಾನ ಮಾಡಿರುವ ಘಟನೆ ಸೋಲಾಪುರ ಬಳಿ ನಡೆದಿದೆ.ಇದನ್ನೂ ಓದಿ: ಶ್ರೀಶೈಲಂ ಸುರಂಗ ಕುಸಿತ – ರಕ್ಷಣಾ ಕಾರ್ಯಕ್ಕೆ ಉತ್ತರಾಖಂಡದ ರ‍್ಯಾಟ್ ಮೈನರ್‌ಗಳ ಸಾಥ್
ಸೋಲಾಪುರದಿಂದ ಸಾಥ್ ರಸ್ತೆ ಮಾರ್ಗವಾಗಿ ಹಿಂತಿರುಗುತ್ತಿರುವಾಗ, ಕರ್ನಾಟಕದ ಬಸ್ ಕಂಡ ಮಹಾರಾಷ್ಟ್ರದ ಸುಮಾರು 15 ಜನ ದುರುಳರು, ಬಸ್ ತೆಡೆದು ಜೈ ಮಹಾರಾಷ್ಟ್ರ ಎನ್ನುವಂತೆ ಕಿರಿಕಿರಿ ಇಟ್ಟಿದ್ದಾರೆ. ಇದಕ್ಕೆ ಬಸ್ ಚಾಲಕ ಶಿವಪ್ಪ ಚಳಗೇರಿ ಹಾಗೂ ಕಂಡಕ್ಟರ್ ಬೇಸರ ವ್ಯಕ್ತಪಡಿಸಿದ್ದು, ನಮಗೆ ಭದ್ರತೆ ಇಲ್ಲದಂತಾಗಿದೆ ಎಂದಿದ್ದಾರೆ.
ಇಳಕಲ್ ಡಿಪೋಗೆ ಬಂದಿಳಿದ ನಂತರ ಮಾತನಾಡಿದ ಅವರು, ಸೋಲಾಪುರ ಬಳಿ ಬಸ್ ತಡೆದು ನಮ್ಮನ್ನು ಬಲವಂತವಾಗಿ ಬಸ್‌ನಿಂದ ಕೆಳಗಿಳಿಸಿ, ಹಾರ ಹಾಕಿ, ಜೈ ಮಹಾರಾಷ್ಟ್ರ ಎನ್ನುವಂತೆ ಒತ್ತಾಯಿಸಿದರು, ನಂತರ ಬಸ್ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆದು, ನಮಗೆ ಕೇಸರಿ ಬಣ್ಣ ಬಳಿದು ಅವಮಾನಮಾಡಿ, ಬಳಿಕ ನಮ್ಮನ್ನು ಹೊರಡಲು ಬಿಟ್ಟರು ಎಂದರು.
ಬಸ್‌ನ ಮಹಿಳಾ ಕಂಡಕ್ಟರ್ ಮಾತನಾಡಿ, ಮಹಾರಾಷ್ಟ್ರದ ಸುಮಾರು 15 ಜನ ಏಕಾಏಕಿ ನಮ್ಮ ಬಸ್ ತಡೆದು ಹೀಗೆ ಮಾಡುತ್ತಾರೆ ಎಂದರೆ ನಮಗೆ ಭದ್ರತೆ ಇಲ್ಲದಂತಾಗಿದೆ. ಬೇರೆ ಬೇರೆ ರಾಜ್ಯಗಳಿಗೆ ಓಡಾಡುವ ಬಸ್ಸುಗಳಿಗೆ ಈ ರೀತಿಯಾದರೆ ಹೇಗೆ? ಜೈ ಮಹಾರಾಷ್ಟ್ರ ಎನ್ನುವಂತೆ ಒತ್ತಾಯಿಸಿ, ಮೀಡಿಯಾದವರನ್ನು ಕರೆದು, ನಮ್ಮಿಂದ ಜೈ ಮಹಾರಾಷ್ಟ್ರ ಎಂದು ಘೋಷಣೆ ಹಾಕಿಸುತ್ತಾರೆ. ನಂತರ ನಮ್ಮ ಜೊತೆ ಫೋಟೊ ತೆಗೆಸಿಕೊಂಡು ಬಳಿಕ ಹೊರಡಲು ಬಿಡುತ್ತಾರೆ ಎಂದು ಅಸಮಾಧಾನ ಹೊರಹಾಕಿದರು.
ಅವರಿಗೆ ನಾವು ಭಾರತೀಯರು ಎಂಬ ಭಾವನೆಯೇ ಇಲ್ಲ. ಭಾರತ ಮಾತೆಯ ಮಕ್ಕಳು ಅಂದರೆ ಎಲ್ಲರೂ ಭಾರತೀಯರು, ಅದನ್ನ ಬಿಟ್ಟು ಜೈ ಮಹಾರಾಷ್ಟ್ರ, ಜೈ ಕರ್ನಾಟಕ ಎನ್ನುವುದು ಸರಿನಾ? ನಾವೆಲ್ಲರೂ ಭಾರತೀಯರು, ಜೈ ಭಾರತ್ ಎನ್ನುವ ಬದಲು, ಜೈ ಮಹಾರಾಷ್ಟ್ರ ಎಂದು ಉಪಟಳವಿಟ್ಟರು ಎಂದರು.ಇದನ್ನೂ ಓದಿ: 2028ರ ಚುನಾವಣೆಗೆ ಸಜ್ಜಾಗಿ – ಪರಾಜಿತ ಅಭ್ಯರ್ಥಿಗಳಿಗೆ ಡಿಕೆಶಿ ಸೂಚನೆ