ಮೈಸೂರು: ಇಬ್ಬರು ಯುವಕರೊಂದಿಗೆ ಯುವತಿಯೊಬ್ಬಳು ರೈತನ ಜಮೀನಿನಲ್ಲಿ ಕಾಣಿಸಿಕೊಂಡಿದ್ದಾಳೆ. ಈ ವೇಳೆ ಯುವಕರನ್ನು ಪ್ರಶ್ನಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗ್ರಾಮಗಳ ಜನರ ನಡುವೆ ಗಲಾಟೆ ನಡೆದಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಹಂಡುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹಂಡುವಿನಹಳ್ಳಿ ಗ್ರಾಮದ ಬಳಿ ಯುವಕರಿಬ್ಬರು ಯುವತಿಯೊಬ್ಬಳನ್ನು ಜಮೀನಿಗೆ ಕರೆತಂದಿದ್ದರು. ಇದನ್ನು ಕಂಡ ಜಮೀನಿನ ಮಾಲೀಕ ದೇವಣ್ಣ ಯುವಕರನ್ನು ಪ್ರಶ್ನಿಸಿದ್ದಾರೆ. ಇದರಿಂದ ಕುಪಿತಗೊಂಡ ಯುವಕರು ತಮ್ಮ ಸ್ನೇಹಿತರನ್ನು ಕರೆಸಿಕೊಂಡು ಹಂಡುವಿನಹಳ್ಳಿ ಗ್ರಾಮಕ್ಕೆ ನುಗ್ಗಿ, ಜಮೀನಿನ ಮಾಲೀಕ ದೇವಣ್ಣನ ಪುತ್ರ ನಾಗರಾಜು ಮೇಲೆ ಹಲ್ಲೆ ಮಾಡಿದ್ದಾರೆ.
ಯುವಕರ ಗುಂಪಿನ ವರ್ತನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು, ಯುವಕರನ್ನು ಹಿಡಿದು ಥಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ನಂಜನಗೂಡು ಗ್ರಾಮಾಂತರ ಪೊಲೀಸರು, ಹಂಡುವಿನಹಳ್ಳಿ ಗ್ರಾಮದ ರಾಮಮಂದಿರದಲ್ಲಿ ಕೂಡಿಹಾಕಿದ್ದ ಇಬ್ಬರು ಯುವಕರನ್ನು ತಮ್ಮ ವಶಕ್ಕೆ ಪಡೆದುಕೊಂಡು ಕರೆದೊಯ್ದಿದ್ದಾರೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.