ಚಿಕ್ಕಬಳ್ಳಾಪುರ: ದೇಶದ ಏಳಿಗೆಗಾಗಿ ಜನರು ಎಲ್‍ಪಿಜಿ ದರ ಏರಿಕೆ ಸ್ವೀಕರಿಸಬೇಕು ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಹೊಸ ವರ್ಷದ ಅಂಗವಾಗಿ ಅಶ್ವಥ್ ನಾರಾಯಣ್ ಅವರು ಕುಟುಂಬ ಸಮೇತರಾಗಿ ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದ ಪುರಾತನ ಪ್ರಸಿದ್ಧ ಶ್ರೀ ಭೋಗನಂದೀಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆ ಸಲ್ಲಿಕೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರಿಗೆ ಹೊಸ ವರ್ಷದ ಶುಭಾಶಯ ಕೋರಿದರು.
ಈ ವೇಳೆ ಸಬ್ಸಿಡಿ ರಹಿತ ಎಲ್‍ಪಿಜಿ ದರ ಏರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಏರಿಕೆ ಆದ ಕಾರಣ ದೇಶದಲ್ಲೂ ಎಲ್‍ಪಿಜಿ ದರ ಏರಿಕೆ ಆಗಿದೆ. ದರ ಏರಿಕೆ ಆದಾಗ ವಿರೋಧ ಇದ್ದೇ ಇರುತ್ತೆ. ಆದರೆ ದೇಶದ ಏಳಿಗೆಗಾಗಿ ಗ್ರಾಹಕರು ಎಲ್‍ಪಿಜಿ ದರ ಏರಿಕೆ ಸ್ವೀಕರಿಸಬೇಕು ಎಂದು ತಿಳಿಸಿದರು.
ಇದೇ ವೇಳೆ ನೂತನ ಬಿಜೆಪಿ ಶಾಸಕರಿಗೆ ಮಂತ್ರಿ ಸ್ಥಾನ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನೂತನ ಬಿಜೆಪಿ ಶಾಸಕರಿಗೆ ಮಂತ್ರಿ ಸ್ಥಾನ ಕೊಡೋದು ಬಹಿರಂಗವಾಗಿಯೇ ಘೋಷಣೆ ಮಾಡಿರುವಂತಹ ವಿಚಾರ. ಹೈಕಮಾಂಡ್ ಗಮನಕ್ಕೆ ತಂದು ಈ ತಿಂಗಳೊಳಗೆ ಮಂತ್ರಿ ಸ್ಥಾನ ಕೊಡುವ ಕೆಲಸ ಆಗಲಿದೆ. ಇದರಲ್ಲಿ ಯಾವುದೇ ವಿಳಂಬವಿಲ್ಲ ಎಂದರು.