ಉಡುಪಿ: ಇದೇ ಮೊದಲ ಬಾರಿಗೆ ಕರಾವಳಿಯ `ಯಕ್ಷಗಾನ’ ಮರಾಠಿ ಭಾಷೆಯಲ್ಲಿ ತರ್ಜುಮೆಗೊಳ್ಳಲಿದೆ. ಕರ್ನಾಟಕದ ಹೆಮ್ಮೆಯ ಕಲೆ ಯಕ್ಷಗಾನದ ಚಂಡೆ ನಾದವು ಇನ್ನು ಮುಂದೆ ಮಹಾರಾಷ್ಟ್ರದಲ್ಲೂ ಕೇಳಲಿದೆ.
ಭಾಷಾವಾರು ಪ್ರಾಂತ ರಚನೆಯ ನಂತರ ಮಹಾರಾಷ್ಟ್ರ ಮತ್ತು ನಾವು ಬಾಂಧವ್ಯ ಬೆಸೆದದ್ದಕ್ಕಿಂತ ಕಚ್ಚಾಡಿದ್ದೇ ಹೆಚ್ಚು. ಆದರೆ ಕನ್ನಡ ನೆಲದ ಯಕ್ಷಗಾನ ಕಲೆಯು ಪ್ರೀತಿ ಹಂಚಲು ಹೊರಟಿದೆ. ಕೋಟ ಶಿವರಾಮ ಕಾರಂತರಿಂದ ಮರುಜೀವ ಪಡೆದ ಬಡಗುತಿಟ್ಟು ಯಕ್ಷಗಾನಕ್ಕೆ ಉಡುಪಿಯ ಯಕ್ಷಗಾನ ಕೇಂದ್ರವೇ ಮೂಲಸ್ಥಾನ. ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ ಪುಣೆಯಿಂದ ವಿದ್ವಾಂಸರುಗಳ ತಂಡವೊಂದು ಉಡುಪಿಯಲ್ಲಿ ಬೀಡುಬಿಟ್ಟಿದೆ. ಕೇಂದ್ರದವರು ಕಲಿಸುವ ಯಕ್ಷಗಾನ ಪ್ರದರ್ಶನ ಕಂಡು ಈ ಕಲೆಯ ಸಾಂಸ್ಕೃತಿಕ ಶ್ರೀಮಂತಿಕೆಗೆ ದಂಗಾಗಿದ್ದಾರೆ.
ಮರಾಠಿಯಲ್ಲಿ ಯಕ್ಷಗಾನ ಪ್ರದರ್ಶನ ಏರ್ಪಡಿಸುವ ಉದ್ದೇಶದಿಂದ ಅವರು ಕರಾವಳಿಗೆ ಬಂದಿದ್ದಾರೆ. ಕನ್ನಡ ಭಾಷೆಯಲ್ಲಿರುವ ಯಕ್ಷಗಾನದ ಅಪರೂಪದ ಕೃತಿಗಳನ್ನು ಅನುವಾದ ಮಾಡಿ, ಮರಾಠಿ ಭಾಷೆಯಲ್ಲೇ ಪ್ರದರ್ಶನ ನೀಡಲು ತಯಾರಾಗಿದ್ದಾರೆ. ಮರಾಠಿ ರಂಗಭೂಮಿಗೆ ವಿಶ್ವ ಭೂಪಟದಲ್ಲಿ ಮಹತ್ವದ ಸ್ಥಾನಮಾನ ಇದೆ. ಇನ್ನು ಮುಂದೆ ನಮ್ಮ ಯಕ್ಷಗಾನವೂ ಮರಾಠಿ ನೆಲದಲ್ಲಿ ಮನೆಮಾತಾಗಲು ಸಿದ್ಧತೆ ನಡೆಯುತ್ತಿದೆ.
ಯಕ್ಷಗಾನ ಮಹಾರಾಷ್ಟ್ರ ಮಂದಿಗೆ ಪರಿಚಯವಾಗಿಲ್ಲ. ಅದಕ್ಕೆ ನಾವು ಯಕ್ಷಗಾನವನ್ನು ಸಂಪೂರ್ಣವಾಗಿ ಮರಾಠಿಯಲ್ಲಿ ಅನುವಾದ ಮಾಡಿದ್ದೇವೆ. ಈ ವಿಚಾರದಿಂದ ನಾವು ಉಡುಪಿಗೆ ಬಂದಿದ್ದೇವೆ. ನಾವು ಮೊದಲು ಯಕ್ಷಗಾನದ ಪ್ರಕಾರದಲ್ಲಿ ಇರುವ ಏಳೆಂಟು ಪ್ರಸಂಗಗಳನ್ನು ಅನುವಾದ ಮಾಡುತ್ತೇವೆ. ಅದರ ಕಾವ್ಯ, ಗದ್ಯವನ್ನು ಅನುವಾದ ಮಾಡಿ ಪ್ರಕಟಿಸುತ್ತೆವೆ. ಆ ಬುಕ್ ಜುಲೈ ತಿಂಗಳಿನೊಳಗೆ ಪಬ್ಲಿಶ್ ಆಗುತ್ತದೆ. ಬಳಿಕ ಅದರಲ್ಲಿ ಎರಡು ಪ್ರಸಂಗವನ್ನು ವೇದಿಕೆ ಮೇಲೆ ತರುತ್ತೇವೆ. ಇದಕ್ಕಾಗಿ ನಮಗೆ ಬೇರೆ ಬೇರೆ ಕಲಾವಿದರ ಸಹಾಯ ಬೇಕಾಗುತ್ತದೆ. ಮೊದಲು ಪುಣೆದಲ್ಲಿ ಮಾಡಿ ಯಶಸ್ವಿಯಾದರೆ ಬೇರೆ ಮಹಾರಾಷ್ಟ್ರದಲ್ಲಿ ಮಾಡುತ್ತೇವೆ ಎಂದು ಮಹಾರಾಷ್ಟ್ರ ಸಾಂಸ್ಕೃತಿಕ ತಜ್ಞರಾದ ಗುರುರಾಜ್ ಕುಲಕರ್ಣಿ ಹೇಳಿದ್ದಾರೆ.
ಪುಣೆಯಲ್ಲಿ 3 ಲಕ್ಷಕ್ಕೂ ಅಧಿಕ ಕನ್ನಡಿಗರಿದ್ದಾರೆ. ಅವರು ಕನ್ನಡ ಭಾಷೆಯಲ್ಲಿ ನಡೆಯುವ ಯಕ್ಷಗಾನಗಳನ್ನು ಕಂಡು ಖುಷಿಪಡುತ್ತಾರೆ. ಆದರೆ ಅಲ್ಲಿರುವ ಮರಾಠಿಗರನ್ನೂ ಯಕ್ಷಗಾನ ಆಕರ್ಷಿಸಿದೆ. ತಮ್ಮ ಭಾಷೆಯಲ್ಲೇ ಯಕ್ಷಗಾನ ಮಾಡಿ ಈ ಕಲೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಈ ಮರಾಠಿ ವಿದ್ವಾಂಸರು ಯೋಜನೆ ಹಾಕಿಕೊಂಡಿದ್ದಾರೆ.
ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಐದು ಮಹತ್ವದ ಯಕ್ಷಗಾನ ಕೃತಿಗಳು ಭಾಷಾನುವಾದ ಆಗಲಿದೆ. ಮುಂದೆ ಯಕ್ಷಗಾನ ಕೇಂದ್ರದ ಗುರುಗಳೇ ಪುಣೆಗೆ ತೆರಳಿ ಯಕ್ಷಗಾನ ತರಬೇತಿ ನೀಡಲಿದ್ದಾರೆ. ಅಲ್ಲಿಂದ ಮುಂದೆ ಮರಾಠಿಯಲ್ಲೇ ಯಕ್ಷಗಾನ ಪ್ರದರ್ಶನ ಏರ್ಪಾಟಾಗಲಿದೆ. ಮಹಾರಾಷ್ಟ್ರದ ಅನೇಕ ಕಲಾ ಪ್ರಕಾರಗಳಿಗೆ ಯಕ್ಷಗಾನದ ನೃತ್ಯ ಮತ್ತು ರಂಗಸೂತ್ರಗಳೇ ಮೂಲ ಎನ್ನುವುದು ಈ ವಿದ್ವಾಂಸರ ಖಚಿತ ಅಭಿಪ್ರಾಯ. ಈ ವಿದ್ವಾಂಸರ ವೀಕ್ಷಣೆಗೆಂದೇ `ವೀರ ಅಭಿಮನ್ಯು’ ಹಾಗೂ `ಜಟಾಯು ಮೋಕ್ಷ’ ಎಂಬ ಎರಡು ಪ್ರಸಂಗಗಳ ಪ್ರದರ್ಶನವೂ ಏರ್ಪಾಟಾಗಿತ್ತು.
ಮಹಾರಾಷ್ಟ್ರದಿಂದ ಕೆಲ ವಿದ್ವಾಂಸರು ಬಂದಿದ್ದಾರೆ. ಇದಕ್ಕೆ ಶಿವರಾಮ ಕಾರಂತ ಅವರು ಮಹಾರಾಷ್ಟ್ರದಲ್ಲಿ ತುಂಬಾ ಕೆಲಸ ಮಾಡಿದ್ದಾರೆ. ಯಕ್ಷಗಾನ ಮಹಾರಾಷ್ಟ್ರಕ್ಕೆ ಹೋಗಿ ಬರುತ್ತಿದೆ. ಉಡುಪಿಯಲ್ಲಿ ಇದು ಮೂಲ ಗುರುಕುಲ ಕೇಂದ್ರ. ವಿದ್ವಾಂಸರು ಇಲ್ಲಿಗೆ ಬಂದು ಇಲ್ಲಿ ಅಧ್ಯಾಯನ ಮಾಡಿ ಬಳಿಕ ಇಲ್ಲಿಯ ತಂಡವನ್ನು ಮರಾಠಿಯಲ್ಲೂ ಮಾಡಿಸುತ್ತಿದ್ದಾರೆ. ಇದು ನಮ್ಮ ಕನ್ನಡ ಭಾಷೆಯ ಹೆಮ್ಮೆ ಎಂದು ಯಕ್ಷ ಗುರುಗಳಾದ ಸಂಜೀವ ಸುವರ್ಣ ತಿಳಿಸಿದ್ದಾರೆ.