Connect with us

Districts

ಇತಿಹಾಸದಲ್ಲೇ ಮೊದಲು- ಮಹಾ ಮಸ್ತಕಾಭಿಷೇಕಕ್ಕಾಗಿ ಜರ್ಮನ್ ತಂತ್ರಜ್ಞಾನ ಬಳಸಿ ಅಟ್ಟಣಿಗೆ ನಿರ್ಮಾಣ

Published

on

ಹಾಸನ: ವಿಶ್ವವಿಖ್ಯಾತ ಶ್ರವಣಬೆಳಗೊಳದ ಬಾಹುಬಲಿ ಮೂರ್ತಿಗೆ ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಮಹಾ ಮಸ್ತಕಾಭಿಷೇಕ ಮುಂದಿನ ವರ್ಷ ನಡೆಯಲಿದ್ದು, 89 ನೇ ಮಹಾಮಜ್ಜನ ನಿಜಕ್ಕೂ ವಿಶೇಷವಾಗಿದೆ.

ಮಹಾ ಮಸ್ತಕಾಭಿಷೇಕಕ್ಕೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಜರ್ಮನ್ ತಂತ್ರಜ್ಞಾನ ಬಳಸಿ ರಿಂಗ್ ಅಂಡ್ ಲಾಕ್ ಮಾದರಿಯ ಹೈಟೆಕ್ ಅಟ್ಟಣಿಗೆ ಮತ್ತು ವೀಕ್ಷಣಾ ಗ್ಯಾಲರಿ ನಿರ್ಮಿಸಲಾಗುತ್ತಿದೆ. ಇಡೀ ವಿಶ್ವದಲ್ಲೇ ಧಾರ್ಮಿಕ ಉತ್ಸವಕ್ಕೆ ಈ ರೀತಿಯ ತಂತ್ರಜ್ಞಾನ ಬಳಕೆ ಮಾಡುತ್ತಿರುವುದು ಇದೇ ಮೊದಲಾಗಿದ್ದು, ಈಗಾಗಲೇ ಶೇ. 50 ರಷ್ಟು ಕಾಮಗಾರಿ ಮುಗಿದಿದೆ.

ಅಟ್ಟಣಿಗೆ ಮೇಲೆರಲು 2 ಕಡೆ ಸ್ಟೇರ್‍ಕೇಸ್ ಜೊತೆಗೆ ಮೂರು ಲಿಫ್ಟ್ ಬಳಸಲಾಗುತ್ತಿದೆ. ಕಾಮಗಾರಿ ಭರದಿಂದ ಸಾಗಿದ್ದು, ನಿತ್ಯ ಒಟ್ಟು 80 ಮಂದಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ವಿಶೇಷವಾಗಿ ಕಬ್ಬಿಣವನ್ನು ಜರ್ಮನಿಯಿಂದ ಆಮದು ಮಾಡಿಕೊಳ್ಳಲಾಗಿದೆ. ಅಟ್ಟಣಿಗೆ ಮತ್ತು ವೀಕ್ಷಣಾ ಗ್ಯಾಲರಿ ಮೇಲೆ ಒಮ್ಮೆಗೆ 5 ರಿಂದ 6 ಸಾವಿರ ಜನ ಕೂರ ಬಹುದಾಗಿದೆ ಎಂದು ಲೆಹರ್ ಕಂಪನಿ ನಿರ್ದೇಶಕ ಮಿತಿಲೇಶ್ ಕುಮಾರ್ ಹೇಳಿದ್ದಾರೆ.

ಇನ್ನು ಗಣ್ಯರು, ಅಂಗವಿಕಲರು, ವೃದ್ಧರನ್ನು ಗೊಮ್ಮಟನ ಶಿರೋಭಾಗಕ್ಕೆ ಎತ್ತೊಯ್ಯಲು ಮತ್ತು ಸರಕು ಸರಂಜಾಮು ಸಾಗಿಸಲು ಸ್ವಿಜರ್ಲ್ಯಾಂಡ್‍ನಿಂದ ಮೂರು ಲಿಫ್ಟ್ ತರಿಸಲಾಗುತ್ತಿದೆ. ಒಟ್ಟಿನಲ್ಲಿ ಈ ರೀತಿಯ ಅತ್ಯಾಧುನಿಕ ತಂತ್ರಜ್ಞಾನವನ್ನು ವಿಶ್ವದಲ್ಲೇ ಪ್ರಥಮ ಬಾರಿಗೆ ಧಾರ್ಮಿಕ ಕಾರ್ಯಕ್ರಮಕ್ಕೆ ಬಳಕೆ ಮಾಡುತ್ತಿರುವುದು ಇದೇ ಮೊದಲು ಎಂದು ಮಸ್ತಕಾಭಿಷೇಕ ವಿಶೇಷಾಧಿಕಾರಿ ವರಪ್ರಸಾದ್ ರೆಡ್ಡಿ ತಿಳಿಸಿದರು.

ಈ ಹಿನ್ನೆಲೆಯಲ್ಲಿ ಇಂದು ಶ್ರವಣಬೆಳಗೊಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡುತ್ತಿದ್ದು, ಮಸ್ತಕಾಭಿಷೇಕ ಕಾಮಗಾರಿ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಜೊತೆಗೆ ಉನ್ನತಾಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ಮಾಡಲಾಗಿದ್ದು, ಸರಕಾರ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಮಧ್ಯಾಹ್ನ ಸುಮಾರು 12.20 ಕ್ಕೆ ಮಂಗಳೂರಿನಿಂದ ಹೆಲಿಕಾಪ್ಟರ್ ನಲ್ಲಿ ಸಿಎಂ ಆಗಮಿಸಲಿದ್ದಾರೆ.

ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ಗೊಮ್ಮಟೇಶ್ವರನ ಮಸ್ತಕಾಭಿಷೇಕಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

Click to comment

Leave a Reply

Your email address will not be published. Required fields are marked *