ಶಿವಮೊಗ್ಗ: ಇದೇ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ನವೆಂಬರ್ 23 ರಿಂದ 30 ರವರೆಗೆ ರಾಜ್ಯಮಟ್ಟದ ಒಲಿಂಪಿಕ್ ಕ್ರೀಡಾಕೂಟ ನಡೆಸಲು ನಿರ್ಧರಿಸಲಾಗಿದೆ.
ಯುವಜನ ಸೇವಾ ಮತ್ತು ಕ್ರೀಡಾ ಸಚಿವರಾಗಿ ಈಶ್ವರಪ್ಪ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಶಿವಮೊಗ್ಗದಲ್ಲಿ ಈ ರೀತಿಯ ರಾಜ್ಯಮಟ್ಟದ ಕ್ರೀಡಾಕೂಟ ನಡೆಸಲು ನಿರ್ಧರಿಸಲಾಗಿದ್ದು ಇದು ಜಿಲ್ಲೆಯ ಅಭಿವೃದ್ಧಿ ಜೊತೆಗೆ ಕ್ರೀಡಾಪಟುಗಳ ಉತ್ತೇಜನಕ್ಕೆ ಸಹಕಾರಿಯಾಗಿದೆ. ಈ ಕ್ರೀಡಾಕೂಟವು ಶಿವಮೊಗ್ಗದ ನೆಹರೂ ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ ಸೇರಿದಂತೆ, ನಗರದ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆಸಲು ಭರ್ಜರಿ ತಯಾರಿ ಮಾಡಿಕೊಳ್ಳಲಾಗುತ್ತಿದೆ.
Advertisement
Advertisement
ಕ್ರೀಡಾಕೂಟದ ಯಶಸ್ವಿ ಅಯೋಜನೆಗೆ ಸಾರ್ವಜನಿಕ ಸಂಘ-ಸಂಸ್ಥೆಗಳಿಗೆ ಕೈ ಜೋಡಿಸಲು ಮನವಿ ಕೂಡ ಮಾಡಿಕೊಳ್ಳಲಾಗಿದೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳ ವಸತಿ ಊಟ ಉಪಹಾರ ಮತ್ತು ಸಾರಿಗೆ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು ಹಾಗು ಎಲ್ಲಾ ಕ್ರೀಡಾ ಸಂಸ್ಥೆಗಳು ಸಕ್ರಿಯವಾಗಿ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಕ್ರೀಡಾ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ. ಈ ಬಗ್ಗೆ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಸಚಿವರು ಕ್ರೀಡಾಕೂಟವನ್ನು ಯಶಸ್ವಿಗೊಳಿಸಲು ಕೈ ಜೋಡಿಸಿ ಎಂದು ಮನವಿ ಕೂಡ ಮಾಡಿಕೊಂಡಿದ್ದಾರೆ.
Advertisement
ಇದೇ ಪ್ರಥಮ ಬಾರಿಗೆ ಶಿವಮೊಗ್ಗದಲ್ಲಿ ಈ ಒಲಿಂಪಿಕ್ ಕ್ರೀಡಾಕೂಟ ಆಯೋಜಿಸಲಾಗಿದ್ದು ಈ ಕ್ರೀಡಾಕೂಟದಲ್ಲಿ, ಒಟ್ಟು 25 ವಿವಿಧ ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಸುಮಾರು 4 ಸಾವಿರ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಶಿವಮೊಗ್ಗ ಸೇರಿದಂತೆ ತಾಲೂಕು ಕೇಂದ್ರಗಳಲ್ಲಿ ಕೆಲವು ಸ್ಪರ್ಧೆಗಳನ್ನು ಆಯೋಜಿಸಲು ಕೂಡ ಉದ್ದೇಶಿಸಲಾಗಿದೆ.
Advertisement
ಈ ಒಲಿಂಪಿಕ್ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ಸ್ವಿಮ್ಮಿಂಗ್, ರೆಸ್ಲಿಂಗ್, ಆರ್ಚರಿ, ಫೆನ್ಸಿಂಗ್, ಸೈಕ್ಲಿಂಗ್, ಜೂಡೋ, ಹಾಕಿ, ಬಾಲ್ ಬ್ಯಾಡ್ಮಿಂಟನ್, ನೆಟ್ಬಾಲ್ ಬ್ಯಾಡ್ಮಿಂಟನ್ ಸೇರಿದಂತೆ 25 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ನಗರದ ನೆಹರು ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ, ಕ್ರೀಡಾ ಸಂಕೀರ್ಣ, ಸೇರಿದಂತೆ ವಿವಿಧ ಕಾಲೇಜುಗಳ ಕ್ರೀಡಾಂಗಣಗಳಲ್ಲಿ ಹಲವು ಸ್ಪರ್ಧೆಗಳನ್ನ ಆಯೋಜಿಸಲು ತೀರ್ಮಾನಿಸಲಾಗಿದೆ.