Tuesday, 16th October 2018

Recent News

ರಾಜ್ಯದಲ್ಲೇ ಮೊದಲು- ಮೋದಿ ಭಾವಚಿತ್ರವನ್ನು ಬೆನ್ನ ಮೇಲೆ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ!

ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ಕಾವು ಹೆಚ್ಚಾಗ್ತಿದೆ. ರಾಷ್ಟ್ರೀಯ ಪಕ್ಷದ ನಾಯಕರು ರಾಜ್ಯದ ಕಡೆ ಮುಖ ಮಾಡಿದ್ದಾರೆ. ಈ ಮಧ್ಯೆ ಅಭಿಮಾನಿಯೊಬ್ಬರು ಮೋದಿ ಮೇಲಿನ ಅಭಿಮಾನವನ್ನು ತೋರಿಸಲು ರೆಡಿಯಾಗಿದ್ದು, ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿಯವರನ್ನು ವಿಭಿನ್ನವಾಗಿ ಸ್ವಾಗತಿಸಲು ಸಿದ್ಧರಾಗಿದ್ದಾರೆ.

ಇಲ್ಲಿಯವರೆಗೂ ತಮ್ಮ ನೆಚ್ಚಿನ ಫಿಲ್ಮ್ ಹೀರೋ ಅಥವಾ ಕ್ರಿಕೆಟ್ ತಾರೆಯರ ಟ್ಯಾಟೂವನ್ನು ಹಾಕಿಸಿಕೊಂಡಿರೋದನ್ನು ಕೇಳಿದ್ದೀರಿ, ನೋಡಿದ್ದೀರಿ. ಆದರೆ ಈ ವ್ಯಕ್ತಿ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಟ್ಯಾಟೂವನ್ನು ಬೆನ್ನಮೇಲೆ ಹಾಕಿಸಿಕೊಂಡಿದ್ದಾರೆ. ಇದು ರಾಜ್ಯದಲ್ಲಿಯೇ ಮೊದಲ ಬಾರಿಗೆ ಮೋದಿ ಅವರ ಭಾವಚಿತ್ರವನ್ನ ಬೆನ್ನ ಮೇಲೆ ಹಾಕಿಸಿಕೊಳ್ಳುತ್ತಿರೋದಂತೆ.

ಮೂಲತಃ ರಾಯಚೂರಿನ ದೇವರಾಯದುರ್ಗದ ನಿವಾಸಿಯಾಗಿರೋ ಬಸವರಾಜ್ ಮಡಿವಾಳ ಅವರು ಈ ರೀತಿ ಮೋದಿ ಅವರ ಟ್ಯಾಟೂವನ್ನು ಹಾಕಿಸಿಕೊಂಡಿರೋ ಅಭಿಮಾನಿ. ಕಲಾವಿದ ಶಂಕರ್ ಸತತ 15 ತಾಸು ಈ ಮೋದಿ ಟ್ಯಾಟೂವನ್ನು ಬಿಡಿಸಲು ತೆಗೆದುಕೊಂಡಿದ್ದಾರೆ. ಅವರು ಮೋದಿ ಪ್ರಧಾನಿಯಾದ ಮೇಲೆ ನಮ್ಮ ದೇಶದ ಭದ್ರತೆ ಹೆಚ್ಚಾಗಿದ್ದು, ಜೊತೆಗೆ ಇಡೀ ವಿಶ್ವ ನಮ್ಮ ದೇಶದ ಕಡೆ ತಿರುಗಿ ನೋಡುವಂತೆ ಮಾಡಿದ ಪ್ರಧಾನಿ ನಮ್ಮ ಮೋದಿ. ಅದಕ್ಕಾಗಿ ಅವರ ಟ್ಯಾಟೂವನ್ನು ಹಾಕಿಸಿಕೊಂಡಿದ್ದೇನೆ ಎಂದು ಬಸವರಾಜ್ ತಿಳಿಸಿದ್ದಾರೆ.

ಮೋದಿ ರಾಜ್ಯದಲ್ಲಿ ಚುನಾವಣಾ ಪ್ರಚಾರ ಮಾಡಲು ಯಾವೆಲ್ಲಾ ಜಿಲ್ಲೆಗಳಿಗೆ ಹೋಗುತ್ತಾರೋ ಆ ಎಲ್ಲ ಜಿಲ್ಲೆಗಳಿಗೆ ನಾನು ಹೋಗಿ ನನ್ನ ಟ್ಯಾಟೂವನ್ನು ಜನರಿಗೆ ತೋರಿಸಿ ಮೋದಿ ಹಾಗೂ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ. ನಾನು ನನ್ನ ಟ್ಯಾಟೂವನ್ನು ಮೋದಿಗೆ ತೋರಿಸಬೇಕು ಅವರನ್ನು ಒಮ್ಮೆ ಭೇಟಿಯಾಗಬೇಕು ಎನ್ನುವ ಆಸೆ ಇದೆ ಎಂದು ಅಂತ ಅವರು ಆಶಯ ವ್ಯಕ್ತಪಡಿಸಿದ್ದಾರೆ.

ಈಗ ಚುನಾವಣೆ ಹತ್ತಿರ ಆಗುತ್ತಿರೋದ್ರಿಂದ ರಾಜಕೀಯ ನಾಯಕರ ಅಭಿಮಾನಿಗಳು ಟ್ಯಾಟೂ ಹಾಕಿಸಿಕೊಳ್ಳೋಕೆ ಬರುತ್ತಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಮೋದಿ ಅವರ ಟ್ಯಾಟೂವನ್ನು ಬೆನ್ನ ಮೇಲೆ ಹಾಕುತ್ತಿರೋದು. ನನಗೂ ಬಹಳ ಸಂತೋಷವಾಗ್ತಿದೆ ಅಂತಾ ಟ್ಯಾಟೂ ಶಂಕರ್ ತಮ್ಮ ಸಂತಸವನ್ನು ಹೊರಹಾಕಿದ್ದಾರೆ.

ಸದ್ಯ ಚುನಾವಣೆ ಸಮೀಪವಾಗುತ್ತಿದಂತೆ ಪ್ರಚಾರ ಕಾರ್ಯನೂ ಜೋರಾಗುತ್ತಿದ್ದು, ಮೋದಿ ರಾಜ್ಯಕ್ಕೆ ಬಂದಾಗ ತನ್ನ ಟ್ಯಾಟೂ ಮೂಲಕ ಜನರನ್ನು ಸೆಳೆಯಲು ಬಸವರಾಜ್ ರೆಡಿಯಾಗಿದ್ದಾರೆ.

Leave a Reply

Your email address will not be published. Required fields are marked *