ಸಂಘ ಪರಿವಾರಕ್ಕೆ ದೇಶದ 130 ಕೋಟಿ ಜನರೂ ಹಿಂದೂಗಳೇ: ಮೋಹನ್ ಭಾಗವತ್

Public TV
1 Min Read
mohan bhagwat

ಹೈದರಾಬಾದ್: ಸಂಘ ಪರಿವಾರಕ್ಕೆ ದೇಶದ 130 ಕೋಟಿ ಜನರೂ ಹಿಂದೂಗಳೇ ಎಂದು ರಾಷ್ಚ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಹೈದರಾಬಾದಿನಲ್ಲಿ ನಡೆಯುತ್ತಿರುವ ಆರ್‌ಎಸ್ಎಸ್ ಮೂರು ದಿನಗಳ ‘ವಿಜಯ್ ಸಂಕಲ್ಪ ಸಭಾ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಭಾರತ ಮಾತೆಯ 130 ಕೋಟಿ ಪುತ್ರರು ಯಾವುದೇ ಭಾಷೆಯನ್ನು ಬೇಕಾದರೆ ಮಾತನಾಡಲಿ, ಯಾವುದೇ ಧರ್ಮ ಆಚರಣೆಯನ್ನು ಅನುಸರಿಸಲಿ. ಇವರೆಲ್ಲ ಹಿಂದೂ ಧರ್ಮವನ್ನು ಆಚರಿಸದೇ ಇದ್ದರೂ ಸಂಘದ ಪಾಲಿಗೆ ಇವರೆಲ್ಲರೂ ಹಿಂದೂಗಳೇ ಎಂದು ಅಭಿಪ್ರಾಯಪಟ್ಟರು.

ಭಾರತವು ಸಾಂಪ್ರದಾಯಿಕವಾಗಿ ಹಿಂದುತ್ವವಾಗಿದೆ. ಭಾರತದ ಮೋಕ್ಷ ರಾಜಕೀಯ ಮತ್ತು ರಾಜಕೀಯ ನಾಯಕರಿಂದ ಸಾಧ್ಯವಿಲ್ಲ. ಆದರೆ ಉತ್ತಮ ಸಮಾಜ ಮತ್ತು ಹಿಂದುತ್ವದಿಂದ ಸಾಧ್ಯವಿದೆ ಎಂದು ಹೇಳಿದರು.

20 ಸಾವಿರಕ್ಕೂ ಅಧಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಹಿಂದೂ ಸಮಾಜ. ಭಾರತ ನನ್ನ ತಾಯಿನಾಡು ಎಂದು ಪರಿಗಣಿಸಿದಾಗ, ಜಲ(ನೀರು), ಜಂಗಲ್(ಅರಣ್ಯ), ಜಾನುವಾರು(ಪ್ರಾಣಿಗಳು) ಗಳನ್ನು ಪ್ರೀತಿಸುವ ಮಂದಿ ಯಾವುದೇ ಧರ್ಮ, ಭಾಷೆಯನ್ನು ಅನುಸರಿಸಲಿಸಲಿ ಅವರೆಲ್ಲರೂ ಭಾರತದ ಮಕ್ಕಳು ಎಂದು ತಿಳಿಸಿದರು.

ಈ ವೇಳೆ ಬ್ರಿಟಿಷರ ಒಡೆದು ಆಳುವ ನೀತಿಯನ್ನು ಪ್ರಸ್ತಾಪಿಸಿದ ಬಳಿಕ ರವೀಂದ್ರ ನಾಥ್ ಟಾಗೋರ್ ಅವರ ಹೇಳಿಕೆಯನ್ನು ಉಲ್ಲೇಖಿಸಿ, ದೇಶದಲ್ಲಿ ರಾಜಕೀಯದಿಂದ ಎಂದಿಗೂ ಬದಲಾವಣೆಯನ್ನು ತರಲು ಸಾಧ್ಯವಿಲ್ಲ. ಆದರೆ ದೇಶದ ಜನರಿಂದ ಬದಲಾವಣೆಯನ್ನು ತರಬಹುದು ಎಂದರು.

rss 1

ಈ ವೇಳೆ ‘ಧರ್ಮ ವಿಜಯ್’ ಪ್ರಸ್ತಾಪ ಮಾಡಿದ ಅವರು, ಆರ್‌ಎಸ್ಎಸ್ ಎಲ್ಲರ ಅಭಿವೃದ್ಧಿಯನ್ನು ಬಯಸುತ್ತದೆ. ಜನರನ್ನು ಒಂದುಗೂಡಿಸುವ ಕೆಲಸವನ್ನು ಸಂಘ ಮಾಡುತ್ತದೆ. ಕಾರ್ಯಕರ್ತರು ಪ್ರತಿದಿನ ಒಂದು ಗಂಟೆಯನ್ನು ಧರ್ಮ ವಿಜಯಕ್ಕಾಗಿ ಮೀಸಲಿಡಬೇಕು. ಕಾರ್ಯಕರ್ತರು ಮನೆ ಮನೆಗೆ ತೆರಳಿ ಸಂಘದ ಉದ್ದೇಶವನ್ನು ತಿಳಿಸಬೇಕು ಎಂದು ಹೇಳಿದರು.

Share This Article