ಭುವನೇಶ್ವರ್: ಖಾಸಗಿ ಕೋಚಿಂಗ್ ಕ್ಲಾಸಿನ ಇಂಗ್ಲಿಷ್ ಶಿಕ್ಷಕರೊಬ್ಬರು ಸಂಬಳಕ್ಕೆ ಬೇಡಿಕೆ ಇಟ್ಟಿದ್ದಕ್ಕೆ ಅವರಿಗೆ ಬೂಟ್ ಹಾರ ಹಾಕಿ ಅವಮಾನ ಮಾಡಿದ ಘಟನೆ ಓಡಿಶಾದ ನಯಾಗರ್ ಜಿಲ್ಲೆಯಲ್ಲಿ ನಡೆದಿದೆ.
ಮಾಯಾಧರ್ ಮೋಹಪಾತ್ರ ಎಂಬವರು ಖಾಸಗಿ ಕೋಚಿಂಗ್ ಸಂಸ್ಥೆ ಸತ್ಯಸಾಯಿ ಟ್ಯುಟೋರಿಯಲ್ ನಲ್ಲಿ ಇಂಗ್ಲಿಷ್ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಕೋಚಿಂಗ್ ಕ್ಲಾಸಿನ ಮಾಲೀಕ ತಿಂಗಳ ಸಂಬಳವನ್ನು ನೀಡಿರಲಿಲ್ಲ. ಹಾಗಾಗಿ ತಮ್ಮ ತಿಂಗಳ ಸಂಬಳ ಕೊಡಿ ಎಂದು ಕೇಳಿದ್ದಕ್ಕೆ ಸಿಟ್ಟಾದ ಮಾಲೀಕ ತಪನ್ ಪಾತ್ರ ಶಿಕ್ಷಕ ಮಾಯಾಧರ್ ರವರಿಗೆ ಬೂಟಿನ ಹಾರ ಹಾಕಿ ಅವಮಾನ ಮಾಡಿದ್ದಾರೆ.
ಮಹಾಪಾತ್ರ ರವರು ಹೇಳುವಂತೆ ಕೋಚಿಂಗ್ ಕ್ಲಾಸ್ ನ ಮಾಲೀಕ ತಿಂಗಳ ಸಂಬಳವನ್ನು ನೀಡಿರಲಿಲ್ಲ. ತಮ್ಮ ಸಂಬಳವನ್ನು ನೀಡುವಂತೆ ಪದೇ ಪದೇ ಮಾಲೀಕನಿಗೆ ಕೇಳಿಕೊಂಡಿದ್ದರೂ, ಇದಕ್ಕೆ ತಪನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮಾಲೀಕ ತಪನ್ ಶಿಕ್ಷಕ ಮಾಯಾಧರ್ ರವರಿಗೆ ನೌಕರಿಯನ್ನೇ ಬಿಟ್ಟು ಹೋಗುವಂತೆ ಕೇಳಿದ್ದಾರೆ. ಅಲ್ಲದೇ ಕೋಪಗೊಂಡ ತಪನ್ ತಮ್ಮ ಇಬ್ಬರು ಸಹಾಯಕರೊಂದಿಗೆ ಶಿಕ್ಷಕ ಮಾಯಾಧರ್ ರವರನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮರಕ್ಕೆ ಕಟ್ಟಿಹಾಕಿದ್ದಾರೆ. ನಿಷ್ಕಾರುಣವಾಗಿ ಶಿಕ್ಷಕ ಮಹಾಪಾತ್ರ ರನ್ನು ಥಳಿಸಿ, ಈ ದೃಶ್ಯವನ್ನು ವಿಡಿಯೋ ಮಾಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಈ ಘಟನೆ ಬೆಳಕಿಗೆ ಬಂದಿದೆ.