ಹಾಸನ: ಬೆಳಗಾವಿ ಆಯ್ತು, ಈಗ ಹಾಸನ ಸರದಿ. ಚನ್ನರಾಯಪಟ್ಟಣ ತಾಲೂಕಿನ ಕುಂದೂರು ಮಠ ಗ್ರಾಮದ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನಲ್ಲೂ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಸಂಘರ್ಷ ಏರ್ಪಟ್ಟಿದೆ.
ಜಿಲ್ಲಾ ಉಸ್ತುವಾರಿ ಸಚಿವ ರೇವಣ್ಣ, ಪುತ್ರ ಸೂರಜ್ ಅಧಿಕಾರ ಉಳಿಸಿಕೊಳ್ಳಲು ಆರು ಮಂದಿ ಸದಸ್ಯರ ಸಹಿಯನ್ನು ಪೋರ್ಜರಿ ಮಾಡಿದ್ದಾರೆಂದು ಆರೋಪಿಸಿ ಸಹಕಾರಿ ಬ್ಯಾಂಕ್‍ನ ಇತರೆ ಸದಸ್ಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
13 ಮಂದಿ ಸದಸ್ಯರನ್ನು ಹೊಂದಿರುವ ಈ ಸಹಕಾರಿ ಸಂಘ ಜೆಡಿಎಸ್ ಹಿಡಿತದಲ್ಲಿತ್ತು. ಆದರೆ ಕೆಲ ದಿನಗಳ ಹಿಂದೆ ಹಾಲಿ ಅಧ್ಯಕ್ಷ ಜೆಡಿಎಸ್‍ನ ರವೀಶ್, ಕಾಂಗ್ರೆಸ್‍ನಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಸಂಘವನ್ನು ಮತ್ತೆ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ರೇವಣ್ಣ ಆಡಳಿತಾವಧಿ ಮುಗಿಯುವುದಕ್ಕೆ ಇನ್ನೂ ಎರಡು ವರ್ಷ ಬಾಕಿ ಇರುವಂತೆ ಸೂಪರ್‌ಸೀಡ್ ಮಾಡಿ ನಿಯಂತ್ರಿಸಲು ಪ್ಲಾನ್ ಮಾಡಿದ್ದಾರೆ. ಅದಕ್ಕಾಗಿಯೇ 6 ಮಂದಿ ಸದಸ್ಯರ ಸಹಿಯನ್ನು ನಕಲು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಚನ್ನರಾಯಪಟ್ಟಣ ಶಾಸಕ ಬಾಲಕೃಷ್ಣ ಮತ್ತು ಸೂರಜ್ ಈ ಪ್ರಕರಣದಲ್ಲಿ ಭಾಗಿ ಎಂದು ಆರೋಪಿಸಿರುವ ಸಂಘದ ಇತರೆ ಸದಸ್ಯರು ಇದು ಅಸಂವಿಧಾನಿಕ ಎಂದು ಪ್ರತಿಭಟನೆ ನಡೆಸಿದ್ದಾರೆ.
ಸದಸ್ಯರನ್ನು ತಮ್ಮ ಮನೆಗೆ ಕರೆದುಕೊಂಡು ಒತ್ತಾಯ ಪೂರ್ವಕವಾಗಿ ನಿಯಮಮೀರಿ ಅವರ ಸಹಿಯನ್ನು ಪಡೆದಿದ್ದಾರೆ ಎನ್ನುವುದು ಪ್ರತಿಭಟನಾಕಾರರ ಆರೋಪ. ಹಾಲಿ ಅಧ್ಯಕ್ಷ ರವೀಶ್ ಮತ್ತು ಇತರೆ ಸದಸ್ಯರು ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ಯಲ್ಲಿ ಭಾಗಿಯಾಗಿದ್ದು, ಸಚಿವರು ಹಾಗೂ ಸೂರಜ್ ರೇವಣ್ಣ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv