– ಐತಿಹಾಸಿಕ ಕ್ಷಣಕ್ಕೆ ಭಾರತ ಕಾತರ!
ಬೆಂಗಳೂರು: ಚಂದ್ರನ ಅಂಗಳದಲ್ಲಿ ನಮ್ಮ ದೇಶದ ಗಗನನೌಕೆ ಇಳಿಯುವ ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಕೊನೆಯ ಆ 20 ನಿಮಿಷಗಳು ಬಹುಶಃ ಪ್ರತಿಯೊಬ್ಬ ಭಾರತೀಯರ ಎದೆಬಡಿತ ಹೆಚ್ಚಾಗಿರುತ್ತೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ-3 (Chandrayaan-3) ನೌಕೆಯ ವಿಕ್ರಮ್ ಲ್ಯಾಂಡರ್ (Vikram Lander) ಅನ್ನು ಇಳಿಸುವ ಈ ಮಹತ್ವದ ಕ್ಷಣವನ್ನ ಕಣ್ತುಂಬಿಕೊಳ್ಳಲು ಜನ ಕಾತುರವಾಗಿದ್ದಾರೆ. 2019ರ ಸೆಪ್ಟೆಂಬರ್ 6ರಂದು ಆ ಕ್ಷಣದಲ್ಲಿ ಉಂಟಾದ ಆಘಾತ, ನೋವು ಮತ್ತೆ ಎದುರಾಗದಿರಲಿ ಅನ್ನೋದು ಕೋಟ್ಯಂತರ ಜನರ ಪ್ರಾರ್ಥನೆ. ಅದಕ್ಕಾಗಿ ವಿಜ್ಞಾನಿಗಳು (Scientists) ಮಾತ್ರವಲ್ಲ, ಜನಸಾಮಾನ್ಯರೂ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
Advertisement
ಪ್ರಗ್ಯಾನ್ ರೋವರ್ (Pragyan Rover) ಅನ್ನು ಹೊತ್ತ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿದ್ದು, ದಕ್ಷಿಣ ಧ್ರುವದ ಮೇಲೆ ಸಂಜೆ 6:04ರ ವೇಳೆಗೆ ಯಾವುದೇ ಅಡೆತಡೆ ಇಲ್ಲದೇ ಚಂದ್ರನ ಅಂಗಳದಲ್ಲಿ ಇಳಿಯುವ ಮೂಲಕ ಇತಿಹಾಸ ನಿರ್ಮಿಸುವ ಭರವಸೆ ಮೂಡಿಸಿದೆ. ಜುಲೈ 14ರಂದು ಉಡಾವಣೆಗೊಂಡ ಚಂದ್ರಯಾನ-3 ನೌಕೆಯ ಇಷ್ಟು ದಿನದ ಪಯಣದಂತೆಯೇ ಕೊನೆಯ 20 ನಿಮಿಷಗಳ ಯಾನ ಅತ್ಯಂತ ನಿರ್ಣಾಯಕ.
Advertisement
ಆರಂಭದ ಪ್ರಯಾಣ ಹೇಗಿತ್ತು?
ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಕೇಂದ್ರದ (ಇಸ್ರೋ) ಬಾಹುಬಲಿ ರಾಕೆಟ್ ಅಥವಾ ಉಡಾವಣಾ ವಾಹನ ಮಾರ್ಕ್-3, ಚಂದ್ರಯಾನ-3 ಅನ್ನು ಹೊತ್ತು ತಂದು ಕಕ್ಷೆಗೆ ಸೇರ್ಪಡೆ ಮಾಡಿತ್ತು. ಆಗಸ್ಟ್ 1ರಂದು ಚಂದ್ರನ ಕಡೆಗಿನ 3.84 ಲಕ್ಷ ಕಿಮೀ ಪ್ರಯಾಣ ಆರಂಭಿಸಿ, ಆಗಸ್ಟ್ 5ರಂದು ಚಂದ್ರಯಾನ ಉಪಗ್ರಹವು ಚಂದ್ರನ ಕಕ್ಷೆಗೆ ಪ್ರವೇಶಿಸಿತ್ತು. ಅನೇಕ ದಿನಗಳವರೆಗೆ ಅಲ್ಲಿಯೇ ಅದು ಸ್ಥಿರವಾಗಿ ನಿಂತಿತ್ತು. ಇದನ್ನೂ ಓದಿ: Chandrayaan-3: ಕೊನೆಯ ಆ 20 ನಿಮಿಷವೇ ಆತಂಕ – ಲ್ಯಾಂಡಿಗ್ ಹೇಗಿರುತ್ತೆ? ಈ ಬಗ್ಗೆ ನೀವು ತಿಳಿಯಲೇಬೇಕು…
Advertisement
Advertisement
ಚಂದ್ರಯಾನದ ಒಂದೊಂದೇ ಪ್ರಕ್ರಿಯೆಗಳನ್ನು ಇಸ್ರೋ ಹಂತ ಹಂತವಾಗಿ ಮತ್ತು ಸೂಕ್ಷ್ಮವಾಗಿ ನೆರವೇರಿಸುತ್ತಾ ಬಂದಿದೆ. ಇದರಲ್ಲಿ ನಿರ್ಣಾಯಕ ಮತ್ತು ಕ್ಲಿಷ್ಟಕರ ಕಾರ್ಯವೆಂದರೆ ಆಗಸ್ಟ್ 17ರಂದು ನಡೆದ ಪ್ರೊಪಲ್ಷನ್ ಮಾಡ್ಯೂಲ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಹೊತ್ತ ವಿಕ್ರಮ್ ಲ್ಯಾಂಡರ್ ಪ್ರತ್ಯೇಕಿಸುವುದು. ಕಕ್ಷೆಯಲ್ಲಿ ಚಂದ್ರನಿಂದ 153*163 ಕಿಮೀ ದೂರದಲ್ಲಿ ಇರುವಾಗ ಡಿಬೂಸ್ಟಿಂಗ್ ಮಾಡುವ ಕಾರ್ಯ ಯಶಸ್ವಿಯಾಗಿತ್ತು. ನಿಯಂತ್ರಿತ ಅವರೋಹಣ ಕಾರ್ಯ ಆರಂಭಕ್ಕೂ ಮುನ್ನ ವಿಕ್ರಮ್ ಲ್ಯಾಂಡರ್ ಅನ್ನು 134*25 ಕಿಮೀ ದೀರ್ಘ ವೃತ್ತಾಕಾರದ ಕಕ್ಷೆಯಲ್ಲಿ ಚಂದ್ರನ ಮೇಲ್ಮೈಗೆ ಇನ್ನಷ್ಟು ಹತ್ತಿರವಾಗಿ ಇಳಿಸಲಾಗಿತ್ತು. ಈವರೆಗೂ ಚಂದ್ರಯಾನ-3ರ ಎಲ್ಲಾ ಪ್ರಕ್ರಿಯೆಗಳೂ ಅಡೆತಡೆಯಿಲ್ಲದೆ ಸಫಲವಾಗಿ ನಡೆದಿದೆ. ಚಂದ್ರಯಾನ-2ರಲ್ಲಿಯೂ ಈವರೆಗಿನ ಹಂತಗಳು ಯಶಸ್ವಿಯಾಗಿದ್ದವು ಎನ್ನುವುದು ಗಮನಾರ್ಹ.
ಚಂದ್ರಯಾನ-3 ಹಾದಿ
* ಉಡಾವಣೆ – ಜುಲೈ 14
* ವೆಚ್ಚ – 615 ಕೋಟಿ (ಅವತಾರ್ 2-1930 ಕೋಟಿ)
* ತೂಕ – 3,900 ಕೆಜಿ (ಲ್ಯಾಂಡರ್, ರೋವರ್)
* ಹಂತ – 3 ಹಂತಗಳಲ್ಲಿ ಕಕ್ಷೆ ಸೇರ್ಪಡೆ
* ದೂರ – 3,84,400 ಕಿ.ಮೀ.
* ಪಯಣ – 40 ದಿನ
* ಲ್ಯಾಂಡರ್ – ವಿಕ್ರಮ್
* ರೋವರ್ – ಪ್ರಗ್ಯಾನ್
* ಲ್ಯಾಂಡಿAಗ್ – ಆಗಸ್ಟ್ 23, ಸಂಜೆ 6.04 ಗಂಟೆ
* ಮೀಸಲು ದಿನ – ಆಗಸ್ಟ್ 27
* ಉದ್ದೇಶ – ಚಂದ್ರನ ಮಣ್ಣು, ಮೇಲ್ಮೈ ಅಧ್ಯಯನ
* ನಿರ್ವಹಣೆ – ಪೀಣ್ಯ, ಬೆಂಗಳೂರು ಇಸ್ರೋ ಕೇಂದ್ರ
Web Stories