ಮಂಡ್ಯ/ ಮೈಸೂರು: ಕಲುಷಿತ ಆಹಾರ (Food Poison) ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದ ಮತ್ತೊಬ್ಬ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೇ ಮೈಸೂರಿನ (Mysuru) ಖಾಸಗಿ ಆಸ್ಪತ್ರೆಯಲ್ಲಿ ಮಧ್ಯರಾತ್ರಿ ಮೃತಪಟ್ಟಿದ್ದಾನೆ.
ನಮೀಬ್ ಮಾಂತೆ ಮೃತ ವಿದ್ಯಾರ್ಥಿ. ಈ ಮೂಲಕ ಮೃತ ವಿದ್ಯಾರ್ಥಿಗಳ ಸಂಖ್ಯೆ 2ಕ್ಕೆ ಏರಿಕೆಯಾಗಿದೆ. ಉಳಿದ 46 ಮಂದಿಯ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿದೆ.
ಮಳವಳ್ಳಿ (Malavalli) ತಾಲ್ಲೂಕಿನ ಟಿ.ಕಾಗೇಪುರದ ಗೋಕುಲ ವಿದ್ಯಾಸಂಸ್ಥೆಯ ಮಕ್ಕಳ ಪೈಕಿ 6ನೇ ತರಗತಿ ವಿದ್ಯಾರ್ಥಿ, ಮೇಘಾಲಯದ ಕಿರ್ಶನ್ ಲ್ಯಾಂಗ್ (13) ಭಾನುವಾರ ಮೃತಪಟ್ಟಿದ್ದ.
ಈ ಪ್ರಕರಣದ ಭೇದಿಸಲು ಮಳವಳ್ಳಿ ಡಿವೈಎಸ್ಪಿ ವಿ.ಕೃಷ್ಣಪ್ಪ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಆಕಸ್ಮಿಕವಾಗಿ ಆಹಾರ ಪದಾರ್ಥಗಳಿಂದ ಫುಡ್ ಪಾಯಿಸನ್ ಆಗಿದ್ಯಾ? ಅಥವಾ ಉದ್ದೇಶ ಪೂರ್ವಕವಾಗಿ ಯಾರೋ ಊಟವನ್ನು ಕಲುಷಿತ ಮಾಡಿದ್ದಾರಾ ಎಂಬುದರ ಬಗ್ಗೆ ಖುದ್ದು ಮಂಡ್ಯ ಎಸ್ಪಿ ಮಾರ್ಗದರ್ಶನದಲ್ಲಿ ತನಿಖೆ ನಡೆಯಲಿದೆ. ಇದನ್ನೂ ಓದಿ: ಮಳವಳ್ಳಿ ವಸತಿ ಶಾಲೆಯ ದುರ್ಘಟನೆ – ಅಧಿಕಾರಿಗಳಿಂದ ಮಾಹಿತಿ ಪಡೆದ ಹೆಚ್‌ಡಿಕೆ; ಮೃತ ವಿದ್ಯಾರ್ಥಿಗೆ ಸಂತಾಪ
ಏನಿದು ಪ್ರಕರಣ?
ಶುಕ್ರವಾರ (ಮಾ.14) ಮಳವಳ್ಳಿ ಪಟ್ಟಣದ ಮದನ್ ಲಾಲ್ ಕಲ್ಯಾಣ ಮಂಟಪದಲ್ಲಿ ಪುಷ್ಪೇಂದ್ರ ಕುಮಾರ್ ಹೋಳಿ ಹಬ್ಬ ಆಚರಣೆ ಮಾಡಿದ್ದರು. ಈ ಹೋಳಿ ಹಬ್ಬಕ್ಕೆ ಸಿದ್ದರಾಜು ಎಂಬವರ ಹೋಟೆಲ್‌ನಲ್ಲಿ ಪಲಾವ್ ಮಾಡಿಸಲಾಗಿತ್ತು. ಉಳಿಕೆಯಾದ ಪಲಾವ್ ಅನ್ನು ಕಾಗೇಪುರದ ಗೋಕುಲ ವಿದ್ಯಾ ಸಂಸ್ಥೆಗೆ ಕಳುಹಿಸಲಾಗಿತ್ತು.
ಈ ವಸತಿ ಶಿಕ್ಷಣ ಸಂಸ್ಥೆಯಾದ ಅಲ್ಲಿ ಮೇಘಾಲಯ ಹಾಗೂ ನೇಪಾಳ ಮೂಲದ ಮಕ್ಕಳು ಕಲಿಯುತ್ತಿದ್ದಾರೆ. ಊಟ ಸೇವಿಸಿದ್ದ ಮಕ್ಕಳು ಶನಿವಾರ ಬೆಳಿಗ್ಗೆ ಅಸ್ವಸ್ಥಗೊಂಡಿದ್ದರು. ಅವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಭಾನುವಾರ ಬೆಳಿಗ್ಗೆ ಮಕ್ಕಳಲ್ಲಿ ತೀವ್ರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದರಿಂದಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಮಂಡ್ಯದ ಮಿಮ್ಸ್ ಮತ್ತು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಹೋಳಿ ಕಾರ್ಯಕ್ರಮದಲ್ಲಿ ಭಾಗಿಯಾದ 30ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಈ ಪ್ರಕರಣ ಸಂಬಂಧ ಹೋಳಿ ಆಯೋಜಕ ಪುಷ್ಪೇಂದ್ರ, ಹೋಟೆಲ್ ಮಾಲೀಕ ಸಿದ್ದರಾಜು, ಕಲ್ಯಾಣ ಮಂಟಪ ಸಿಬ್ಬಂದಿ ಕೃಷ್ಣ, ಗೋಕುಲ ವಿದ್ಯಾ ಸಂಸ್ಥೆ ಮುಖ್ಯಸ್ಥ ಲಂಕೇಶ್, ಕಾರ್ಯದರ್ಶಿ ಜಗದೀಶ್, ಕೆಲಸಗಾರ ಅಭಿಷೇಕ್ ಮೇಲೆ ಬಿಇಓ ಉಮಾ ನೀಡಿದ ಮೇರೆಗೆ ಎಫ್‌ಐಆರ್ ದಾಖಲಾಗಿದೆ.