ತುಮಕೂರು ಶಾಲೆಯಲ್ಲಿ 3 ಮಕ್ಕಳ ಸಾವು ಪ್ರಕರಣ- ಮರಣೋತ್ತರ ಪರೀಕ್ಷೆಯಲ್ಲಿ ವಿಷದಂಶ ಪತ್ತೆ

Public TV
2 Min Read
tmk 2

– ಪತ್ನಿ ಜೊತೆ ಮಾಜಿ ಶಾಸಕ ಕಿರಣ್ ಕುಮಾರ್ ನಾಪತ್ತೆ

ತುಮಕೂರು: ಜಿಲ್ಲೆಯ ಬೋರ್ಡಿಂಗ್ ಶಾಲೆಯಲ್ಲಿ ವಿಷಾಹಾರ ಸೇವಿಸಿ ಸಾವನ್ನಪ್ಪಿದ್ದ ಮಕ್ಕಳ ಮರಣೋತ್ತರ ಪರೀಕ್ಷೆ ನಡೆದಿದ್ದು, ಮಕ್ಕಳ ದೇಹದಲ್ಲಿ ದ್ರವರೂಪದ ವಿಷಕಾರಿ ಅಂಶವಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ರಕ್ತದ ಮಾದರಿಯನ್ನು ಎಫ್‍ಎಸ್‍ಎಲ್‍ಗೆ ಕಳುಹಿಸಲಾಗಿದೆ. 15 ದಿನದೊಳಗೆ ಮರಣೋತ್ತರ ಪರೀಕ್ಷೆಯ ವರದಿ ಸಿಕ್ಕ ನಂತರ ಸತ್ಯಾಂಶ ಗೊತ್ತಾಗಲಿದೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಡಾ.ದಿನೇಶ್ ಹೇಳಿದ್ದಾರೆ.

                                     tmk 4 e1489148199690

ಪ್ರಕರಣಕ್ಕೆ ಸಂಬಂಧಿಸಿಂತೆ ಪ್ರಮುಖ ಆರೋಪಿಗಳು ನಾಪತ್ತೆಯಾಗಿದ್ದು, ಅವರಿಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ತಿಪಟೂರು ಡಿವೈಎಸ್‍ಪಿ ವೇಣುಗೋಪಾಲ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಶಾಲಾ ಮಾಲೀಕರಾದ ಮಾಜಿ ಶಾಸಕ ಕಿರಣ್ ಕುಮಾರ್ ಹಾಗೂ ಪತ್ನಿ ಕವಿತಾಗಾಗಿ ತೀವ್ರ ಶೋಧ ನಡೆಯುತ್ತಿದೆ. ಶಾಲೆಯ ಮಾಲೀಕರು ಬೆಂಗಳೂರಿನಲ್ಲಿ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಎಸ್‍ಪಿ ಇಶಾ ಪಂತ್ ಅಲ್ಲಿಗೂ ತಂಡ ಕಳಿಹಿಸಿರುವುದಾಗಿ ಹೇಳಿದ್ರು. ಶಾಲೆಯಲ್ಲಿದ್ದ ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದೇವೆ. ಎಫ್‍ಎಸ್‍ಎಲ್ ವರದಿ ಬಂದ ಬಳಿಕ ಸಂಪೂರ್ಣ ಮಾಹಿತಿ ತಿಳಿಯಲಿದೆ ಅಂದ್ರು.

isha panth

ವಿದ್ಯಾವಾರಿಧಿ ಶಾಲೆಯ ಮಾಜಿ ಪ್ರಾಂಶುಪಾಲ ರವಿ ಕೂಡ ಘಟನೆ ಬಳಿಕ ತಲೆ ಮರೆಸಿಕೊಂಡಿದ್ದಾರೆ. ವಿಷ ಬೆರಕೆಯಲ್ಲಿ ರವಿ ಕೈವಾಡವಿಡುವ ಶಂಕೆಯಿದ್ದು ರವಿ ಪತ್ತೆಗಾಗಿ ಪೊಲೀಸರಿಂದ ಶೋಧ ನಡೆಯುತ್ತಿದೆ. ಅಗತ್ಯವಿದ್ದರೆ ರವಿ ವಿಚಾರಣೆ ಕೂಡ ನಡೆಯಲಿದೆ ಅಂತಾ ಎಸ್‍ಪಿ ಹೇಳಿದ್ದಾರೆ. ಕಿರಣ್ ಅವರೊಂದಿಗಿನ ವೈಮನಸ್ಸಿನಿಂದ ರವಿ ಶಾಲೆಯಿಂದ ಹೋರಹೋಗಿದ್ದರು ಎಂದು ಹೇಳಲಾಗಿದೆ.

ramesh

ವಿಷ ಆಹಾರ ಸೇವನೆಯಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೆಕ್ಯೂರಿಟಿಗಾರ್ಡ್ ರಮೇಶ್ ಘಟನೆ ಬಗ್ಗೆ ಮಾಹಿತಿ ನೀಡಲು ಹಾತೊರೆಯುತ್ತಿದ್ದಾರೆ. ಆದ್ರೆ ವೆಂಟಿಲಟರ್‍ನಲ್ಲಿ ಉಸಿರಾಡುತ್ತಿರುವುದರಿಂದ ಅವರು ಮಾತನಾಡಲಾಗದೆ ವೇದನೆ ಅನುಭವಿಸುತ್ತಿದ್ದಾರೆ.

ನಡೆದಿದ್ದೇನು?: ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿಯ ವಿದ್ಯಾವಾರಿಧಿ ಇಂಟರ್‍ನ್ಯಾಷನಲ್ ಬೋರ್ಡಿಂಗ್ ಶಾಲೆಯಲ್ಲಿ ವಿಷಯುಕ್ತ ಆಹಾರ ಸೇವಿಸಿ 15 ವರ್ಷದ ಶ್ರೇಯಸ್, ಆಕಾಂಕ್ಷ್ ಪಲ್ಲಕ್ಕಿ ಹಾಗೂ ಶಾಂತಮೂರ್ತಿ ಎಂಬ ಮೂವರು ಅಮಯಾಕ ಮಕ್ಕಳು ಸಾವನಪ್ಪಿದ್ದರು. ಈ ಶಾಲೆ ಬಿಜೆಪಿಯ ಮಾಜಿ ಶಾಸಕ ಕಿರಣ್ ಕುಮಾರ್ ಅವರಿಗೆ ಸೇರಿದ್ದಾಗಿದೆ. ಘಟನೆ ಸಂಬಂಧ ಆರು ಮಂದಿ ವಿರುದ್ದ ಎಫ್.ಐ.ಆರ್ ದಾಖಲಾಗಿತ್ತು. ಇದರಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದೀಗ ಕೋರ್ಟ್ ಇವರಿಗೆ ಜಾಮೀನು ನೀಡಿ ಬಿಡುಗಡೆಗೊಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *