Tuesday, 17th July 2018

Recent News

ಕಾರವಾರದ ಆಹಾರ ಮೇಳಕ್ಕೆ ಸಖತ್ ರೆಸ್ಪಾನ್ಸ್- ಬಿರಿಯಾನಿ, ಕಬ್ಬಿನ ಹಾಲಿನ ದೋಸೆ, ಮೀನಿನ ಖಾದ್ಯಗಳನ್ನ ಸವಿದ ಜನ

ಕಾರವಾರ: ಕರಾವಳಿ ಎಂದಕೂಡಲೇ ಬಗೆಬಗೆಯ ಮೀನಿನ ಖಾದ್ಯಗಳು ಬಾಯಲ್ಲಿ ನೀರೂರಿಸುತ್ತವೆ. ಮೀನಿನ ಖಾದ್ಯಗಳೇ ಇಲ್ಲಿ ಪ್ರಸಿದ್ಧ. ಇಂತಹ ಖಾದ್ಯಗಳ ಬಗ್ಗೆ ಪ್ರಚಾರ ಮಾಡೋ ದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಡಳಿತ ಕರಾವಳಿ ಆಹಾರ ಮೇಳವನ್ನು ಆಯೋಜಿಸಿತ್ತು.

ಕಾರವಾರದ ಕೋಡಿಬಾಗನ ಕಾಳಿನದಿ ತಡದಲ್ಲಿರುವ ಕಾಳಿ ರಿವರ್ ಗಾರ್ಡನ್‍ ನಲ್ಲಿ ಆಹಾರ ಮೇಳವನ್ನು ಆಯೋಜಿಸಲಾಗಿತ್ತು. ಜಿಲ್ಲಾಡಳಿತದ ಸಹಯೋಗದೊಂದಿಗೆ 5 ದಿನಗಳ ಕರಾವಳಿಯ ವಿವಿಧ ಸಂಪ್ರದಾಯಿಕ ಖಾದ್ಯಗಳ ಆಹಾರ ಮೇಳವನ್ನು ಸಿದ್ಧಪಡಿಸಲಾಗಿದ್ದು, 18 ಮಳಿಗೆಗಳನ್ನು ತೆರೆಯಲಾಗಿದೆ.

ಜಿಲ್ಲೆಯಿಂದಲ್ಲದೇ ಹೊರ ಜಿಲ್ಲೆಯಿಂದಲೂ ಜನರು ಆಹಾರ ಮೇಳಕ್ಕೆ ಆಗಮಿಸಿದ್ದು, ಕರಾವಳಿಯ ಸಂಪ್ರದಾಯಿಕ ಆಹಾರಗಳ ಅನಾವರಣ ಮಾಡಲಾಯಿತು. ಆಹಾರ ಮೇಳದಲ್ಲಿ ಸಾವಿರಾರು ಜನರು ಭಾಗವಹಿಸಿ ರುಚಿ ರುಚಿಯಾದ ಸಂಪ್ರದಾಯಿಕ ಆಹಾರವನ್ನು ಆಸ್ವಾದಿಸಿದ್ರು. ಕರಾವಳಿಯ ಬಿರಿಯಾನಿ, ತಟ್ಟೆಇಡ್ಲಿ, ಕಬ್ಬಿನ ಹಾಲಿನ ದೋಸೆ, ಮೀನಿನ ಖಾದ್ಯಗಳು, ಪಾನಿಪುರಿ ಹೀಗೆ ಹತ್ತು ಹಲವು ವಿವಿಧ ಖಾದ್ಯಗಳು ಮೇಳದಲ್ಲಿ ಇದ್ದವು. ಎಲ್ಲಾ ಆಹಾರಗಳು ಜನರನ್ನು ಆಕರ್ಷಣೆ ಮಾಡಿದ್ದು, ಸಂಗೀತದ ಜೊತೆ ಆಹಾರವನ್ನು ಸವಿದು ಎಂಜಾಯ್ ಮಾಡಿದ್ರು.

ಒಂದೆಡೆ ಆಹಾರ ಮೇಳಕ್ಕೆ ಮುಗಿಬೀಳುತ್ತಿರೋ ಜನ, ಇನ್ನೊಂದೆಡೆ ಬಂದ ಗ್ರಾಹಕರಿಗೆ ಬಿಸಿಬಿಸಿ ತಿನಿಸುಗಳನ್ನು ಮಾಡಿಕೊಡುತ್ತಿರೋ ಬಾಣಸಿಗರು. ಐದು ದಿನಗಳವರೆಗೆ ನೆಡೆಯುವ ಈ ಮೇಳ ಮೊದಲ ದಿನವೇ ಸಾವಿರಾರು ಆಹಾರಪ್ರಿಯರನ್ನ ಆಕರ್ಷಿಸಿದೆ. ಮೊದಲಬಾರಿಗೆ ಜಿಲ್ಲಾಡಳಿತದ ಪ್ರಯತ್ನಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು, ಜನರು ಮುಗಿಬಿದ್ದು ಖಾದ್ಯಗಳ ಸವಿ ಸವಿಯುತ್ತಿದ್ದಾರೆ.

Leave a Reply

Your email address will not be published. Required fields are marked *