ಬೆಳಗಾವಿ: ಮಗು ಮಾರಾಟ ಜಾಲ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಕಿಂಗ್‍ಪಿನ್ ಅಬ್ದುಲ್ ಲಾಡಖಾನ್‍ಗೆ ಸೇರಿದ ಕಿತ್ತೂರಿನ ಫಾರ್ಮಹೌಸ್‍ನಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಆರೋಪಿಗೆ ಸೇರಿದ ತೋಟದಲ್ಲಿ ಗರ್ಭಪಾತ (Foeticide Case) ನಡೆಸಿ ಹೂತಿಟ್ಟಿದ್ದ ಭ್ರೂಣಗಳು ಪತ್ತೆಯಾಗಿವೆ.
ಸ್ಥಳೀಯರಿಂದ ನಕಲಿ ವೈದ್ಯ ಲಾಡಖಾನ್ ಗರ್ಭಪಾತ ಮಾಡಿಸುತ್ತಿದ್ದ ಎಂಬ ಆರೋಪ ಕೇಳಿಬಂದಿತ್ತು. ಈ ಆರೋಪದ ಬೆನ್ನಲ್ಲೇ ಕಿತ್ತೂರು ಪೊಲೀಸ್ (Kittur police) ಠಾಣೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಕೇಸ್ ದಾಖಲಿಸಿದ್ದರು. ಬಳಿಕ ಲಾಡಾಖಾನ್ ಹಾಗೂ ಆತನ ಸಹಾಯಕ ರೋಹಿತ್‍ನನ್ನು ಬಂಧಿಸಿದ್ದರು. ಇದೀಗ ನ್ಯಾಯಾಲಯದ ಅನುಮತಿ ಮೇರೆಗೆ ಫಾರ್ಮ್ ಹೌಸ್ ಇರುವ ಜಾಗದಲ್ಲಿ ಅಧಿಕಾರಿಗಳು ನೆಲ ಅಗೆದು ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಸಾರಿಗೆ ಬಸ್ ಚಾಲಕನಿಂದ ಹಿಟ್ & ರನ್- ಸುಳಿವುಕೊಟ್ಟ ಪ್ಲಾಸ್ಟಿಕ್ ಚೂರು
ಭ್ರೂಣಗಳನ್ನು ಹೂತಿದ್ದ ಲಾಡಖಾನ್‍ನ ಸಹಾಯಕ ರೋಹಿತ್‍ನ ಸಮ್ಮುಖದಲ್ಲಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಬಳಿಕ ಹೂತಿಟ್ಟಿದ್ದ ಭ್ರೂಣಗಳನ್ನು ಹೊರತೆಗೆದು ಪೊಲೀಸರು ತೆಗೆದುಕೊಂಡು ಹೋಗಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಆರೋಪಿ ಲಾಡಖಾನ್ ಆಸ್ಪತ್ರೆ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಯನ್ನು ಸೀಜ್ ಮಾಡಿದ್ದಾರೆ. ಬಂಧಿತ ಲಾಡಖಾನ್ ಗರ್ಭಪಾತ ಹಾಗೂ ಮಗು ಮಾರಾಟ ಕೇಸ್‍ನಲ್ಲಿ ಎ2 ಆರೋಪಿಯಾಗಿದ್ದಾನೆ.
ಇತ್ತೀಚೆಗೆ ರಾಮತೀರ್ಥ ನಗರದಲ್ಲಿ ಮಕ್ಕಳ ರಕ್ಷಣಾ ಘಟಕದ ಕೈಗೆ ಸಿಕ್ಕಿ ಬಿದ್ದಿದ್ದ ಮಹಿಳೆಯಿಂದ ಈ ಜಾಲ ಪೊಲೀಸರ ಖೆಡ್ಡಾಕ್ಕೆ ಬಿದ್ದಿದೆ. ನಕಲಿ ವೈದ್ಯನೊಬ್ಬನಿಂದ ಮಗುವನ್ನು 60 ಸಾವಿರ ರೂ.ಗೆ ಪಡೆದು 1.40 ಲಕ್ಷ ರೂ.ಗೆ ಮಾರಾಟ ಮಾಡಲು ಮಹಾದೇವಿ ಎಂಬ ಮಹಿಳೆ ಬಂದಿದ್ದಳು. ಈ ವಿಷಯ ತಿಳಿದುಕೊಂಡಿದ್ದ ಮಕ್ಕಳ ರಕ್ಷಣಾ ಘಟಕ ಪೊಲೀಸರ ಸಹಾಯದಿಂದ ಆಕೆಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಇಡೀ ಪ್ರಕರಣ ಬೆಳಕಿಗೆ ಬಂದಿತ್ತು.
ಇನ್ನೂ ಈ ಪ್ರಕರಣದಲ್ಲಿ ಕೇವಲ ಅಬ್ದುಲ್ ಗಫಾರ್ ಲಾಡಖಾನ್ ಮಾತ್ರ ಇರದೆ, ಹಲವು ವೈದ್ಯರು ಶಾಮೀಲಾಗಿರುವ ಕುರಿತು ಅಧಿಕಾರಿಗಳು ಹಾಗೂ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸ್ವಾಮಿ ಶವ ಎಸೆಯೋ ಬಗ್ಗೆ ದರ್ಶನ್ ಮನೆಯಲ್ಲೇ ನಡೆದಿತ್ತು ಸ್ಕೆಚ್!