ರಾಂಚಿ: ಮೇವು ಹಗರಣಕ್ಕೆ ಸಂಬಂಧಿಸಿದ 5ನೇ ಪ್ರಕರಣದಲ್ಲಿ (ಡೊರಂಡ ಖಜಾನೆ ಪ್ರಕರಣ) ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರಿಗೆ ಜಾರ್ಖಂಡ್ ಹೈಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ್ದ ಸಿಬಿಐ ವಿಶೇಷ ನ್ಯಾಯಾಲಯ ಯಾದವ್ ಅವರನ್ನು ದೋಷಿ ಎಂದು ಪರಿಗಣಿಸಿ 5 ವರ್ಷ ಜೈಲು ಶಿಕ್ಷೆ, ದಂಡ ವಿಧಿಸಿತ್ತು. ಆದರೆ ಅವರ ಆರೋಗ್ಯ ಸ್ಥಿತಿ ಸರಿಯಿಲ್ಲದ ಕಾರಣ ಜಾರ್ಖಂಡ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ – ನವಾಬ್ ಮಲಿಕ್ ಜಾಮೀನು ಅರ್ಜಿ ತಿರಸ್ಕರಿಸಿದ ಸುಪ್ರೀಂ
ಆರೋಗ್ಯ ಸಮಸ್ಯೆ ಕಾರಣದಿಂದಾಗಿ ಅವರಿಗೆ ಜಾಮೀನು ನೀಡಲಾಗಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ. 1 ಲಕ್ಷ ರೂ. ಶ್ಯೂರಿಟಿ ಮೊತ್ತ ಮತ್ತು 10 ಲಕ್ಷ ರೂ. ದಂಡವಾಗಿ ಠೇವಣಿ ಮಾಡಬೇಕಾಗುತ್ತದೆ ಎಂದು ಯಾದವ್ ಪರ ವಕೀಲ ತಿಳಿಸಿದ್ದಾರೆ.
ಅವಿಭಜಿತ ಬಿಹಾರದಲ್ಲಿ ನಡೆದಿದ್ದ 950 ಕೋಟಿ ರೂ. ಮೊತ್ತದ ಮೇವು ಹಗರಣದಲ್ಲಿ, ವಿವಿಧ ಜಿಲ್ಲೆಗಳಲ್ಲಿನ ಸರ್ಕಾರಿ ಖಜಾನೆಗಳಿಂದ ಹಣವನ್ನು ಅಕ್ರಮವಾಗಿ ಪಡೆದುಕೊಳ್ಳಲಾಗಿತ್ತು. ಡೊರಂಡ ಜಿಲ್ಲಾ ಸರ್ಕಾರಿ ಖಜಾನೆಯಿಂದ 139 ಕೋಟಿ ರೂ. ಕ್ರಮವಾಗಿ ಪಡೆಯಲಾಗಿತ್ತು. ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಗಳ ಕಂಪನಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ನಿತಿನ್ ಗಡ್ಕರಿ
ಇದೇ ಮೇವು ಹಗರಣದ ದುಮ್ಕಾ, ದಿಯೋಘರ್ ಮತ್ತು ಚೈಬಾಸಾ ಖಜಾನೆಗಳಿಂದ ಹಣ ಪಡೆದುಕೊಂಡ ನಾಲ್ಕು ಪ್ರಕರಣಗಳಲ್ಲೂ ಲಾಲೂ ಅವರಿಗೆ ಜೈಲು ಶಿಕ್ಷೆ, ದಂಡ ವಿಧಿಸಲಾಗಿತ್ತು.