ರಾಂಚಿ: ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಗೆ ಸಿಬಿಐ ವಿಶೇಷ ಕೋರ್ಟ್ ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ 3.5 ವರ್ಷ ಜೈಲು ಶಿಕ್ಷೆಯನ್ನು ಪ್ರಕಟಿಸಿದೆ.
ಶನಿವಾರ ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶಿವಪಾಲ್ ಸಿಂಗ್ ಅವರು ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದ್ದಾರೆ. 3.5 ವರ್ಷದ ಜೈಲು, 5 ಲಕ್ಷ ರೂ. ದಂಡ ವಿಧಿಸಿದ್ದು, ಮೊತ್ತವನ್ನು ಪಾವತಿಸಲು ವಿಫಲವಾದ ಸಂದರ್ಭದಲ್ಲಿ 6 ತಿಂಗಳ ಕಾಲ ಹೆಚ್ಚಿನ ಜೈಲು ಶಿಕ್ಷೆ ನೀಡುವ ಕುರಿತು ತೀರ್ಪಿನಲ್ಲಿ ತಿಳಿಸಿದ್ದಾರೆ. ಇನ್ನು ಪ್ರಕರಣದ ಇತರೇ ಅಪರಾಧಿಗಳಾದ ಫೂಲ್ ಚಂದ್, ಮಹೇಶ್ ಪ್ರಸಾದ್, ಬೇಕ್ ಜೂಲಿಯಸ್, ಸುನೀಲ್ ಕುಮಾರ್, ಸುಧೀರ್ ಕುಮಾರ್ ಮತ್ತು ರಾಜ ರಾಮ್ರಿಗೂ 3.5 ವರ್ಷ ಜೈಲು ಶಿಕ್ಷೆ ಹಾಗೂ 5 ಲಕ್ಷ ರೂ. ದಂಡ ವಿಧಿಸಲಾಗಿದೆ.
ಶುಕ್ರವಾರ ಲಾಲು ಪರ ವಕೀಲರ ಮೂಲಕ ಕೋರ್ಟ್ ಗೆ ಮನವಿಯನ್ನು ಸಲ್ಲಿಸಿ ಲಾಲು ಪ್ರಸಾದ್ ಆರೋಗ್ಯದ ಹದಗೆಟ್ಟಿದ್ದು, ಮಧುಮೇಹ, ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಕೋಟ್ ಗಮನಕ್ಕೆ ತಂದಿದ್ದರು. ಅಲ್ಲದೇ ಲಾಲು ತಮ್ಮ ಮನವಿಯಲ್ಲಿ ಈ ಪಕ್ರರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ಅಂತಾ ಹೇಳಿದ್ದರು.
ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಆರು ಪ್ರಕರಣಗಳ ಪೈಕಿ ಒಂದು ಪ್ರಕರಣದ 22 ಆರೋಪಿಗಳ ಪೈಕಿ ಲಾಲು ಪ್ರಸಾದ್ ಯಾದವ್ ಸೇರಿ 15 ಆರೋಪಿಗಳು ದೋಷಿ ಎಂದು ರಾಂಚಿ ಸಿಬಿಐ ವಿಶೇಷ ಕೋರ್ಟ್ ಕಳೆದ ಡಿಸೆಂಬರ್ 23ರಂದು ತೀರ್ಪು ನೀಡಿ, ಶಿಕ್ಷೆಯ ಪ್ರಮಾಣವನ್ನು ಜನವರಿ 3ಕ್ಕೆ ಕಾಯ್ದಿರಿಸಿತ್ತು. ಆದರೆ ಶುಕ್ರವಾರ ಮೂರನೇ ಬಾರಿಗೆ ತೀರ್ಪನ್ನು ಮುಂದೂಡಿ ತೀರ್ಪನ್ನು ಕಾಯ್ದಿರಿಸಿದ್ದರು.
ಇದೇ ಪ್ರಕರಣ ಸಂಬಂಧ ಬಿಹಾರ ಮಾಜಿ ಮುಖ್ಯಮಂತ್ರಿ ಜಗನ್ನಾಥ ಮಿಶ್ರಾ ಸೇರಿ ಇತರೆ ಏಳು ಆರೋಪಿಗಳನ್ನು ಸಿಬಿಐ ವಿಶೇಷ ನ್ಯಾಯಾಧೀಶ ಶಿವಪಾಲ್ ಸಿಂಗ್ ಅವರು ಖುಲಾಸೆಗೊಳಿಸಿದ್ದರು. ಈ ಹಿಂದೆ ಲಾಲು ವಿರುದ್ಧದ ಆರೋಪಗಳನ್ನು ಜಾರ್ಖಂಡ್ ಹೈಕೋರ್ಟ್ ಕೈಬಿಟ್ಟಿದ್ದನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್‍ನಲ್ಲಿ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಲಾಲು ವಿರುದ್ಧದ ಕ್ರಿಮಿನಲ್ ಸಂಚು ಆರೋಪ ಕೈ ಬಿಡಲು ಸಾಧ್ಯವಿಲ್ಲ. ಎಲ್ಲಾ ಆರೋಪಗಳ ತನಿಖೆಯನ್ನು ಪ್ರತ್ಯೇಕವಾಗಿ ಕೈಗೆತ್ತಿಕೊಳ್ಳುವಂತೆ ಸೂಚಿಸಿತ್ತು.
ಏನಿದು ಪ್ರಕರಣ?
20 ವರ್ಷಗಳ ಹಿಂದೆ ಬಿಹಾರದಲ್ಲಿ ಪಶುಗಳಿಗೆ ಮೇವು ಹಾಗೂ ಔಷಧಿ ಪೂರೈಸುವುದಾಗಿ ಚಾಯ್ಬಾಸ ಜಿಲ್ಲೆಯ ಸರ್ಕಾರಿ ಖಜಾನೆಯಿಂದ ಹಣವನ್ನು ಬಿಡುಗಡೆ ಮಾಡಲಾಗಿತ್ತು. ಜಾನುವಾರುಗಳಿಗೆ ಮೇವು ಹಾಗೂ ಔಷಧ ಒದಗಿಸುವ ನೆಪದಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಸರ್ಕಾರದ ಹಣವನ್ನು ಲೂಟಿ ಮಾಡಿದ್ದರು. 900 ಕೋಟಿ ರೂ. ಮೊತ್ತದ ಮೇವು ಹಗರಣ ಸಂಬಂಧ ಒಟ್ಟು 53 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 44 ಪ್ರಕರಣಗಳ ತೀರ್ಪು ಈಗಾಗಲೇ ಹೊರಬಿದ್ದಿದೆ. ಲಾಲು ಪ್ರಸಾದ್ ಯಾದವ್ ವಿರುದ್ಧ ಆರು ಪ್ರಕರಣಗಳು ದಾಖಲಾಗಿವೆ. ಛಾಯ್ ಬಾಸಾ ಖಜಾನೆಯಿಂದ 37 ಕೋಟಿ ರೂ. ಹಣವನ್ನು ಅಕ್ರಮವಾಗಿ ಪಡೆದ ಆರೋಪವನ್ನು ಲಾಲು ಎದುರಿಸುತ್ತಿದ್ದಾರೆ. 2013ರ ಸೆಪ್ಟೆಂಬರ್ 3ರಂದು ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯ ಲಾಲು ಪ್ರಸಾದ್ ಯಾದವ್ ಅವರನ್ನು ದೋಷಿ ಎಂದು ತೀರ್ಪು ನೀಡಿ 5 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಎರಡೂವರೆ ತಿಂಗಳ ಕಾಲ ಬಿರ್ಸಾ ಮುಂಡಾ ಜೈಲಿನಲಿದ್ದ ಲಾಲೂ ಬಳಿಕ ಸುಪ್ರೀಂ ಕೋರ್ಟ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.