– ಮೇಳೈಸಲಿದೆ ಕೊಡಗಿನ ವಿಶೇಷತೆ
– ಫೆ 7ರಿಂದ ಫಲಪುಷ್ಪ ಪ್ರದರ್ಶನ
ಮಡಿಕೇರಿ: ಹೂವಿನ ರಾಣಿಯರ ಆಗಮನಕ್ಕೆ ಮಡಿಕೇರಿ ಸಂಪೂರ್ಣ ಸಿದ್ಧವಾಗಿದ್ದು, ವಿವಿಧ ರೀತಿಯ ಪುಷ್ಪಗಳ ಪ್ರದರ್ಶನಕ್ಕೆ ರಾಜಾಸೀಟ್ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಪ್ರವಾಸಿ ತಾಣವಾದ ರಾಜಾಸೀಟ್ ನ ಉದ್ಯಾನವನದಲ್ಲಿ ತೋಟಗಾರಿಕಾ ಇಲಾಖೆಯ ವತಿಯಿಂದ ವಾರ್ಷಿಕವಾಗಿ ಆಯೋಜಿಸುವ ಫಲಪುಷ್ಪ ಪ್ರದರ್ಶನ ಕಳೆದ ಒಂದೆರಡು ವರ್ಷಗಳಿಂದ ಕಾರಣಾಂತರಗಳಿಂದ ವಿಳಂಬವಾಗುತ್ತಿತ್ತು. ಇದರಿಂದಾಗಿ ಪುಷ್ಪ ಪ್ರಿಯರಿಗೆ ನಿರಾಸೆಯ ಭಾವ ಎದುರಾಗುತ್ತಿತ್ತು. ಆದರೆ ಈ ವರ್ಷ ಫಲಪುಷ್ಪ ಪ್ರದರ್ಶನವನ್ನು ಬೇಸಿಗೆ ಆರಂಭದ ಈ ಸನ್ನಿವೇಶದಲ್ಲೇ ಆಯೋಜಿಸಲು ತೋಟಗಾರಿಕಾ ಇಲಾಖೆ ಮುಂದಾಗಿದೆ.
Advertisement
Advertisement
ಈ ನಿಟ್ಟಿನಲ್ಲಿ ಈಗಾಗಲೇ ದಿನಾಂಕವೂ ನಿಗಿದಿಗೊಂಡಿದ್ದು, ಸಿದ್ಧತೆ ಭರದಿಂದ ಸಾಗಿದೆ. ಪ್ರಸಕ್ತ ವರ್ಷದ ಫೆ.7 ರಿಂದ 10ರ ವರೆಗೆ ನಾಲ್ಕು ದಿನಗಳ ಕಾಲ ಉದ್ಯಾನವನ ಪುಷ್ಪರಾಣಿಯರಿಂದ, ಮತ್ತಿತರ ಹಲವು ಆಕರ್ಷಣೆಗಳಿಂದ ಕಂಗೊಳಿಸಲಿದೆ. ರಾಜಾಸೀಟ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಸಲಹೆ-ಸೂಚನೆಯಂತೆ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ್, ಸಹಾಯಕ ನಿರ್ದೇಶಕರಾದ ಸಿ.ಎಂ. ಪ್ರಮೋದ್ ನೇತೃತ್ವದಲ್ಲಿ ಸಮಿತಿ ಮೂಲಕ ಅಗತ್ಯ ಸಿದ್ಧತೆಗಳು ಉದ್ಯಾನವನದಲ್ಲಿ ನಡೆಯುತ್ತಿವೆ. ಇದರಿಂದಾಗಿ ಪುಷ್ಪ ಪ್ರಿಯರು ಮತ್ತು ಪ್ರವಾಸಿಗರು ಮತ್ತಷ್ಟು ಸಂತಸಗೊಂಡಿದ್ದಾರೆ.