ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ತೋಟಗಾರಿಕೆ ಇಲಾಖೆ ಕನಕೋತ್ಸವದ ಅಂಗವಾಗಿ ನಾಲ್ಕು ದಿನಗಳ ಕಾಲ ಫಲಪುಷ್ಪ ಪ್ರದರ್ಶನವನ್ನ ಹಮ್ಮಿಕೊಂಡಿದೆ. ಕನಕೋತ್ಸವದ ಫಲಪುಷ್ಪ ಪ್ರದರ್ಶನ ಕಣ್ಮನ ಸೆಳೆಯುತ್ತಿದೆ.
ನಗರದ ಮುನ್ಸಿಪಾಲ್ ಕಾಲೇಜು ಬಳಿ ನಡೆದ ಕಾರ್ಯಕ್ರಮವನ್ನು ಸಂಸದ ಡಿ.ಕೆ ಸುರೇಶ್ ಉದ್ಘಾಟಿಸಿದರು. ಫಲಪುಷ್ಪ ಪ್ರದರ್ಶನದಲ್ಲಿ ಸುಮಾರು 30 ಸಾವಿರ ವಿವಿಧ ಬಗೆಯ ಪುಷ್ಪಗಳಿಂದ ತಾಲೂಕಿನ ಶಕ್ತಿದೇವತೆ ಕಬ್ಬಾಳಮ್ಮ ದೇವಿಯ ದೇವಾಲಯವನ್ನು ನಿರ್ಮಿಸಲಾಗಿದ್ದು, ಅತ್ಯಂತ ಆಕರ್ಷಣಿಯವಾಗಿ ನೋಡುಗರ ಮನ ಸೆಳೆದಿದೆ.
Advertisement
ರೈತರ ಕ್ಯಾಪ್ಸಿಕಂ ನಿಂದ ಮಾಡಿದ ಗೋಪುರದಾಕಾರದ ಮಾದರಿ, ಜೊತೆಗೆ ಹಸು ಹಾಗೂ ಕರುವಿನ ಪುಷ್ಪಗಳಿಂದಾದ ಮಾದರಿ ನೋಡುಗರ ಕಣ್ಮನ ಸೆಳೆಯುತ್ತಿದೆ. ಇದಲ್ಲದೇ ಪುಷ್ಪದಲ್ಲಿ ವಿವಿಧ ಆಕಾರಗಳು, ರೈತರ ತರಕಾರಿ ಬೆಳೆಗಳ ವಸ್ತು ಪ್ರದರ್ಶನ, ತಾರಸಿ ಕೈ ತೋಟ, ಮಾದರಿ ತೋಟ ನೋಡುಗರಿಗೆ ಮುದ ನೀಡಿತು. ವಿಶೇಷವಾಗಿ ರೈತ ಉತ್ಪಾದಕರ ಸಂಸ್ಥೆಯ ಮಾದರಿಯನ್ನು ರೈತರಿಗಾಗಿ ಸಿದ್ಧಪಡಿಸಿ ಮಾಹಿತಿಯನ್ನು ನೀಡಲಾಯಿತು.
Advertisement
Advertisement
ಫಲಪುಷ್ಪ ಪ್ರದರ್ಶನದಲ್ಲಿ ಕೇವಲ ಅಲಂಕಾರಿಕ ವಸ್ತುಗಳಿಗೆ ಆದ್ಯತೆ ನೀಡದೆ ರೈತರಿಗೆ ಅಗತ್ಯ ಮಾಹಿತಿಯನ್ನು ಒದಗಿಸುವ ಸಲುವಾಗಿ ರೈತರು ಬೆಳೆದ ಬೆಳೆಗಳ ಪ್ರದರ್ಶನ ಹಾಗೂ ಮಾಹಿತಿ ನೀಡುವ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿದೆ. ತೋಟಗಾರಿಕೆ ಮತ್ತು ಕೃಷಿ ಕ್ಷೇತ್ರದಲ್ಲಾಗಿರುವ ಹೊಸ ಆವಿಷ್ಕಾರಗಳು, ತಾಂತ್ರಿಕತೆಯ ಸದ್ಬಳಕೆ ಬಗ್ಗೆ ರೈತರಿಗೆ ಸಾಕಷ್ಟು ಮಾಹಿತಿ ಜೊತೆಗೆ ಮಾರ್ಗದರ್ಶನ ನೀಡಿ ಸವಾಲನ್ನ ಎದುರಿಸುವ ಅರಿವನ್ನು ಪ್ರದರ್ಶನದಲ್ಲಿ ಅಧಿಕಾರಿಗಳು ನೀಡಿದ್ದಾರೆ. ರೇಷ್ಮೆ ಚಾಕಿ ಸಾಕಾಣಿಕೆಯಲ್ಲಿ ಹಂತಕ್ಕೊಂದು ಸೊಪ್ಪು ಪದ್ದತಿ ರೈತರ ಮನ ಮುಟ್ಟುವಂತಿದ್ದವು. ಫಲಪುಷ್ಪ ಪ್ರದರ್ಶನ ಕೇವಲ ಅಲಂಕಾರಿಕೆ ವಸ್ತುಗಳಿಗೆ ಸೀಮಿತವಾಗದೆ ರೈತಾಪಿ ವರ್ಗಕ್ಕೆ ಅರಿವು ಮೂಡಿಸುವ ಕಾರ್ಯಾಗಾರವಾಗಿತ್ತು.
Advertisement
ಅಧಿಕ ಸಾಂದ್ರತೆಯಲ್ಲಿ ಮಾವು, ಹಸಿರು ಮನೆ ತಂತ್ರಜ್ಞಾನ, ಎರೆಹುಳು ಘಟಕ, ಅಂಗಾಂಶ ಕೃಷಿ, ಅಣಬೆ ಬೇಸಾಯ, ತೋಟಗಾರಿಕೆಯಲ್ಲಿ ಬಳಸುವ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಗಳನ್ನು ಈ ಪ್ರದರ್ಶನದಲ್ಲಿ ಏರ್ಪಡಿಸಲಾಗಿತ್ತು. ಅಷ್ಟೇ ಅಲ್ಲದೇ ಕುಂಬಳಕಾಯಿಯಲ್ಲಿ ಕೆತ್ತನೆ ಮಾಡಿದ ವಿವೇಕಾನಂದ, ಗಾಂಧೀಜಿ, ಅಂಬೇಡ್ಕರ್, ಹಾಗೂ ವಿವಿಧ ಪಕ್ಷಿಗಳ ಕಲಾಕೃತಿಗಳನ್ನು ಸಹ ಪ್ರದರ್ಶನಕ್ಕೆ ಇಡಲಾಗಿತ್ತು.