ಮಡಿಕೇರಿ: ಲಾಕ್‍ಡೌನ್ ಆದಾಗಿನಿಂದ ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೇ ನಾಶ ಮಾಡುತ್ತಿದ್ದಾರೆ. ಕೆಲವರು ಬೆಳೆದ ಬೆಳೆಯನ್ನು ಗ್ರಾಮದವರಿಗೆ ಉಚಿತವಾಗಿ ನೀಡಿದ್ದಾರೆ. ಇದೀಗ ಲಾಕ್‍ಡೌನ್ ಪರಿಣಾಮ ಮಾರುಕಟ್ಟೆ ಸಿಗದಿದ್ದಕ್ಕೆ ರೈತ ಮಹಿಳೆಯೊಬ್ಬಳು ಹೊಲದಲ್ಲಿ ಬೆಳೆದಿದ್ದ ಚೆಂಡು ಹೂಗಳನ್ನು ಟ್ರಾಕ್ಟರಿನಿಂದ ನಾಶ ಮಾಡಿಸಿದ್ದಾರೆ.
ಈ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಅವರೇದಾಳು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಭಾಗೀರಥಿ ಎಂಬವರು ಮೂರು ಎಕರೆ ಪ್ರದೇಶದಲ್ಲಿ ಚಂಡು ಹೂಗಳನ್ನು ಬೆಳೆದಿದ್ದರು. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಚೆಂಡು ಹೂಗಳನ್ನು ಲಾಕ್‍ಡೌನ್ ಘೋಷಿಸಿದ ಪರಿಣಾಮ ಸರಿಯಾದ ಸಮಯಕ್ಕೆ ಮಾರಾಟ ಮಾಡಲಾಗದೆ ನಷ್ಟ ಅನುಭವಿಸಿದ್ದರು.
ಈ ಹಿನ್ನೆಲೆಯಲ್ಲಿ ಹೊಲದಲ್ಲಿ ಬೆಳೆದಿದ್ದ ಚಂಡು ಹೂಗಳನ್ನು ಟ್ರಾಕ್ಟರಿನಿಂದ ನಾಶಪಡಿಸಿದ್ದಾರೆ. ಅಲ್ಲದೇ ಚೆಂಡು ಹೂ ಬೆಳೆಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ದಾರಿ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.