ಮಡಿಕೇರಿ: ಇಲ್ಲಿನ ರಾಜಾಸೀಟ್ ಪ್ರವಾಸಿಗರ ನೆಚ್ಚಿನ ಹಾಟ್ ಸ್ಪಾಟ್ ಆಗಿದ್ದು, ಮಂಜಿನ ನಗರಿಗೆ ಆಗಮಿಸುವ ಪ್ರವಾಸಿಗರು ರಾಜಾಸೀಟ್‍ಗೆ ಹೋಗುವುದನ್ನು ಮರೆಯುವುದಿಲ್ಲ. ಕೊಡಗು ಉತ್ಸವದ ಹಿನ್ನೆಲೆಯಲ್ಲಿ ಬಗೆ ಬಗೆಯ ಹೂಗಳಿಂದ ಭೂ ಲೋಕದ ಸ್ವರ್ಗದಂತೆ ರಾಜಾಸೀಟ್ ಕಂಗೊಳಿಸುತ್ತಿದ್ದು, ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ.
ಸೊಂಡಿಲು ಎತ್ತಿ ಆಶೀರ್ವಾದ ಮಾಡುತ್ತಿರುವ ಆನೆಗಳು, ರೇಸ್‍ಗೆ ರೆಡಿಯಾಗಿ ನಿಂತಿರುವ ವಿಂಟೇಜ್ ಕಾರ್ ಗಳು, ಕರುನಾಡ ಜೀವನದಿ ಕಾವೇರಿ ಪ್ರತಿಮೆ, ಕಣ್ಣಿಗೆ ಕಟ್ಟುವ ಹಾಗೆ ಹೂಗಳಿಂದ ನಿರ್ಮಾಣವಾಗಿರುವ ಕಲಾಕೃತಿಗಳು ಕಂಡು ಬರುತ್ತಿದೆ. ಸದಾ ಪ್ರವಾಸಿಗರಿಂದ ತುಂಬಿ ತುಳುಕುವ ರಾಜಾಸೀಟ್ ಸದ್ಯ ವಿವಿಧ ಬಗೆಯ ಹೂಗಳಿಂದಲೇ ಭರ್ತಿಯಾಗಿದೆ.
Advertisement
Advertisement
ಮೂರು ದಿನಗಳ ಕೊಡಗು ಉತ್ಸವಕ್ಕೆ ಈಗಾಗಲೇ ಚಾಲನೆಯೂ ಸಿಕ್ಕಿದೆ. ಹಾಗೆಯೇ ರಾಜಾಸೀಟ್‍ನಲ್ಲಿ ಕುಸುಮಗಳ ಕಲರವ ಶುರುವಾಗಿದೆ. ಪ್ರಾಕೃತಿಕ ವಿಕೋಪದಿಂದ ಕೊಡಗು ಪ್ರವಾಸೋದ್ಯಮ ಸೊರಗಿ ಹೋಗಿದ್ದು, ಪ್ರವಾಸಿಗರನ್ನು ಮತ್ತೆ ಕೊಡಗಿನತ್ತ ಸೆಳೆಯಲು ರಾಜಾಸೀಟ್ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಅಕ್ಟೋಪಸ್, ವಿಂಟೇಜ್ ಕಾರ್, ಅಣಬೆ, ಕಾವೇರಿ ಮಾತೆಯ ಪ್ರತಿಮೆ, ಹೂವಿನ ವೀಣೆ, ಕ್ಯಾಪ್ಸಿಕಂನಿಂದ ಸಿಂಗರಿಸಲ್ಪಟ್ಟ ಕಾಡಾನೆಗಳು, ಹೂವಿನ ಅಲಂಕೃತ ಮಂಟಪ ಹೀಗೆ ತರಹೇವಾರಿ ಹೂವಿನ ಅಲಂಕಾರ ಕಣ್ಮನ ಸೆಳೆಯುತ್ತಿದೆ.
Advertisement
Advertisement
ಫಲಪುಷ್ಪ ಪ್ರದರ್ಶನ ಅಷ್ಟೇ ಅಲ್ಲ ಖ್ಯಾತ ಗಾಯಕರಾದ ಎಂ.ಡಿ ಪಲ್ಲವಿ, ಅರ್ಜುನ್ ಜನ್ಯ ಸೇರಿದಂತೆ ಅನೇಕ ಖ್ಯಾತ ಗಾಯಕರಿಂದ ಸಂಗೀತದ ಕಲರವೇ ಸೃಷ್ಟಿಯಾಗಲಿದೆ. ಸ್ಟ್ರೀಟ್ ಫೆಸ್ಟ್ ಜೊತೆಗೆ ಶ್ವಾನ ಪ್ರದರ್ಶನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಒಟ್ಟಿನಲ್ಲಿ ಕೊಡಗು ಉತ್ಸವ ನೆಪದಲ್ಲಿ ಇಲ್ಲಿ ಸ್ವರ್ಗವೇ ಸೃಷ್ಟಿಯಾಗಿದೆ. ಮೂರು ದಿನ ಈ ಪುಷ್ಪಲೋಕ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv