ಹಾಸನ: ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಮಾತ್ರ ವಿಶೇಷವಾಗಿ ಮುತ್ತುಗದ ಹೂವು ಅರಳುತ್ತೆ. ಮುತ್ತುಗದ ಮರದಲ್ಲಿ ಬಿಡುವ ಕೆಂಪು ಬಣ್ಣದ ಮುತ್ತುಗದ ಹೂವನ್ನು ಶಿವರಾತ್ರಿ ಹಬ್ಬದಂದು ವಿಶೇಷವಾಗಿ ಶಿವನ ಪೂಜೆಗೆ ಬಳಸಲಾಗುತ್ತೆ. ಈ ಮುತ್ತುಗದ ಹೂವು ಹೆಚ್ಚಾಗಿ ಬಿಟ್ಟರೆ ಆ ವರ್ಷ ಉತ್ತಮ ಮಳೆಯಾಗುತ್ತೆ ಎಂಬ ನಂಬಿಕೆಯೂ ಇದೆ. ಹೀಗೆ ಶಿವನಿಗೆ ಸಮರ್ಪಣೆಯಾಗುವ ಕೆಂಪು ವರ್ಣದ ಮುತ್ತುಗದ ಹೂವು ಈ ಬಾರಿ ಎಲ್ಲೆಲ್ಲೂ ಅರಳಿ ನಿಂತಿದ್ದು ಶಿವರಾತ್ರಿ ಸಮಯದಲ್ಲಿ ರೈತನ ಮೊಗದಲ್ಲಿ ಹರ್ಷ ಮೂಡಿಸುತ್ತಿದೆ.
ಮುತ್ತುಗದ ಹೂವು ಸಾಮಾನ್ಯವಾಗಿ ಪ್ರತಿ ವರ್ಷ ಶಿವರಾತ್ರಿ ಹಬ್ಬದ ಸಮಯದಲ್ಲಿ ಅರಳುತ್ತೆ. ಪ್ರತಿ ವರ್ಷವೂ ಮುತ್ತುಗದ ಗಿಡ ಹೂವು ಬಿಡುತ್ತದಾದರೂ ಅದು ಬಿಡುವ ಹೂವಿನ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತೆ. ಕೆಲವೊಂದು ವರ್ಷದಲ್ಲಿ ಅತೀ ಹೆಚ್ಚು ಹೂವು ಬಿಟ್ಟರೆ, ಮತ್ತೆ ಕೆಲವು ವರ್ಷದಲ್ಲಿ ಈ ಹೂವಿನ ಫಸಲು ಬಹುತೇಕ ಕಡಿಮೆಯೆಂದೇ ಹೇಳಬಹುದು. ಶಿವನ ಪೂಜೆಗೆ ಬಳಕೆಯಾಗುವ ಈ ಹೂವನ್ನು ನೋಡಿ ರೈತರು ಮಳೆ, ಬೆಳೆಯ ಲೆಕ್ಕಾಚಾರ ಹಾಕುತ್ತಾರೆ. ಈ ಹೂವು ಹೆಚ್ಚಾಗಿ ಬಿಟ್ಟರೆ ಆ ವರ್ಷ ಉತ್ತಮ ಮಳೆ, ಬೆಳೆಯಾಗುತ್ತೆ ಎಂಬ ನಂಬಿಕೆ ಕೂಡ ಇದೆ. ಈ ವರ್ಷವಂತೂ ಮುತ್ತುಗದ ಮರಗಳು ಹೂವಿನಿಂದ ತುಂಬಿ ತುಳುಕುತ್ತಿದ್ದು ಉತ್ತಮ ಮಳೆಯಾಗುವ ಮುನ್ಸೂಚನೆ ನೀಡುತ್ತಿದೆ. ಈ ಬಾರಿಯಂತು ಮುತ್ತುಗದ ಮರ ಸಾಕಷ್ಟು ಪ್ರಮಾಣದಲ್ಲಿ ಹೂ ಬಿಟ್ಟು ಪ್ರಕೃತಿಯ ಸೌಂದರ್ಯವನ್ನು ದುಪ್ಪಟ್ಟು ಮಾಡಿರುವುದರ ಜೊತೆಗೆ, ಉತ್ತಮ ಮಳೆಯಾಗುವ ಮುನ್ಸೂಚನೆ ನೀಡಿ ರೈತರ ಮೊಗದಲ್ಲಿ ಹರ್ಷ ಮೂಡಿಸಿದೆ.
ಮುತ್ತುಗದ ಮರ ಶಿವರಾತ್ರಿ ಹಬ್ಬದ ಸಮಯದಲ್ಲಿ ಹೂ ಬಿಡುತ್ತೆ. ಇದರ ಸೌಂದರ್ಯಕ್ಕೆ ಮಾರು ಹೋಗಿರುವ ಆಸ್ತಿಕರು ಶಿವರಾತ್ರಿ ಹಬ್ಬದಂದು ತಮ್ಮ ನೆಚ್ಚಿನ ದೈವ ಶಿವನಿಗೆ ಮುತ್ತುಗದ ಹೂವನ್ನು ಸಮರ್ಪಿಸಿ ಪೂಜೆ ಸಲ್ಲಿಸೋದು ಸಾಮಾನ್ಯ. ಈ ಮರದ ಚಕ್ಕೆಯನ್ನು ಹೋಮಗಳಲ್ಲೂ ಕೂಡ ಬಳಸುತ್ತಾರೆ. ಹೀಗಾಗಿ ಮುತ್ತುಗದ ಹೂವು ಪ್ರಕೃತಿಯ ಚೆಲುವನ್ನು ಹೆಚ್ಚಿಸಿರುವುದರ ಜೊತೆಗೆ ಧಾರ್ಮಿಕವಾಗಿಯೂ ಮಹತ್ವ ಪಡೆದುಕೊಂಡಿದೆ. ಈ ಎಲ್ಲ ಕಾರಣಗಳಿಗಾಗಿಯೇ ಶಿವರಾತ್ರಿ ಹಬ್ಬದ ದಿನವಾದ ಇಂದು ಶಿವನ ಪೂಜೆಗೆ ಮುತ್ತುಗದ ಹೂವು ವಿಶೇಷವಾಗಿ ಸಮರ್ಪಣೆಯಾಗುತ್ತಿದೆ.