ಬೆಳಗಾವಿ: ಮನೆಗೆ ಪ್ರವಾಹದ ನೀರು ನುಗ್ಗಿದ ವಿಚಾರ ಕೇಳಿ ಮನೆಯ ಮಾಲೀಕ ಹೃದಯಾಘಾತದಿಂದ (Heart attack) ಮೃತಪಟ್ಟ ಘಟನೆ ಗೋಕಾಕ್‌ನ ಡಾಳಂಬರಿ ತೋಟದ ಬೋಜಗಾರ ಗಲ್ಲಿಯಲ್ಲಿ ನಡೆದಿದೆ.
ಮೃತರನ್ನು ಗ್ರಾಮದ ದಶರಥ ಬಂಡಿ (72) ಎಂದು ಗುರುತಿಸಲಾಗಿದೆ. ಘಟಪ್ರಭಾ ನದಿಯಿಂದ (Ghataprabha River) ಪ್ರವಾಹ (Flood) ಬಂತು ಎಲ್ಲರೂ ಮನೆ ಖಾಲಿ ಮಾಡಿ ಎಂಬ ಸುದ್ದಿ ಕೇಳುತ್ತಿದ್ದಂತೆ ಅವರಿಗೆ ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ.
ಧಾರಾಕಾರದ ಮಳೆಯಲ್ಲಿಯೇ ಅವರ ಅಂತ್ಯ ಸಂಸ್ಕಾರ ಮಾಡಿದ ಕುಟುಂಬ, ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದೆ. ಒಂದೆಡೆ ತಂದೆಯ ಸಾವು, ಇನ್ನೊಂದೆಡೆ ಮನೆ ಮುಳುಗಡೆಯಿಂದ ದಿಕ್ಕು ತೋಚದಂತಾಗಿದೆ ಎಂದು ಮೃತರ ಮಗಳು ಲಕ್ಷ್ಮೀ ಬಂಡಿ `ಪಬ್ಲಿಕ್ ಟಿವಿ’ ಜೊತೆ ದುಃಖ ತೋಡಿಕೊಂಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಬೆಳಗಾವಿ ಸುತ್ತಮುತ್ತ ಭಾರೀ ಮಳೆಯಾಗುತ್ತಿದ್ದು, ಘಟಪ್ರಭಾ ನದಿಯ ನೀರು ತೀವ್ರ ಏರಿಕೆಯಾಗಿದೆ. ಇದೀಗ ನದಿ ಪಾತ್ರಗಳಲ್ಲಿರುವ ಗ್ರಾಮಗಳಿಗೂ ನದಿ ನೀರು ನುಗ್ಗುತ್ತಿದ್ದು, ಅಪಾರ ಪ್ರಮಾಣದ ಹಾನಿಯುಂಟು ಮಾಡಿದೆ.