ಬೆಳಗಾವಿ: ನೆರೆ ಪ್ರವಾಹಕ್ಕೆ ಸಿಕ್ಕ ಬೆಳಗಾವಿ ಜಿಲ್ಲೆ ಅಕ್ಷರಶಃ ನಲುಗಿ ಹೋಗಿತ್ತು. ಸರ್ಕಾರದಿಂದ ತಕ್ಷಣ ಹತ್ತು ಸಾವಿರ ಕೊಡಬೇಕೆಂದು ಆದೇಶ ಮಾಡಿ ಒಂದೂವರೆ ತಿಂಗಳಾದರೂ ಹತ್ತು ಸಾವಿರ ರೂ. ಚೆಕ್‍ಗಳು ಸಂತ್ರಸ್ತರಿಗೆ ಸಿಗುತ್ತಿಲ್ಲ.
ಹೌದು ಬಿದ್ದುಹೋಗಿರುವ ಮನೆ, ನೆಲೆ ಕಾಣದೆ ಕಂಗಾಲಾಗಿರುವ ಕುಟುಂಬಗಳು, ಇನ್ನೂ ಎಷ್ಟು ದಿನಗಳು ಇಂತಹ ವನವಾಸ ಎಂದು ಚಿಂತೆಯಲ್ಲಿ ಜನರಿದ್ದಾರೆ. ಹತ್ತು ಸಾವಿರ ರೂ. ಚೆಕ್‍ಗಳನ್ನೇ ತಲುಪಿಸಲು ಆಗದ ಸರ್ಕಾರ ಮನೆಗಳನ್ನ ಯಾವಾಗ ನಿರ್ಮಾಣ ಮಾಡಿಕೊಡುತ್ತೆ? ಬೆಳೆಗಳಿಗೆ ಪರಿಹಾರವಾದರೂ ಯಾವಾಗ ಕೊಡುತ್ತೆ ಎನ್ನುವ ಆತಂಕದಲ್ಲಿ ಸಂತ್ರಸ್ತರಿದ್ದಾರೆ. ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ನೆರವಾಗಬೇಕಿದ್ದ ಅಧಿಕಾರಿಗಳು ಮಾತ್ರ ಬೇಜವಾಬ್ದಾರಿ ತೋರಿ ಅವರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಇದು ಬೆಳಗಾವಿ ಜಿಲ್ಲೆಯಲ್ಲಿ ನೆರೆ ಪ್ರವಾಹಕ್ಕೆ ಸಿಕ್ಕ ಜನರ ದುಸ್ಥಿತಿಯಾಗಿದೆ. ಇದನ್ನೂ ಓದಿ:ಸಂತ್ರಸ್ತರಿಗೆ ಪರಿಹಾರ ಚೆಕ್ ನೀಡಲು ಲಂಚ ಕೇಳುತ್ತಿದ್ದಾರೆ ಅಧಿಕಾರಿಗಳು
Advertisement
Advertisement
ಕಳೆದ ಎರಡು ತಿಂಗಳ ಹಿಂದೆ ಸುರಿದ ಭಾರೀ ಮಳೆಗೆ ಸವದತ್ತಿ ತಾಲೂಕಿನ ದುಂಡನಕೊಪ್ಪ ಗ್ರಾಮದಲ್ಲಿ ಐವತ್ತಕ್ಕೂ ಅಧಿಕ ಮನೆಗಳು ಧರೆಗುರುಳಿವೆ. ಸಾವಿರಾರು ಎಕ್ರೆ ಬೆಳೆ ಹಾನಿಯಾಗಿದೆ. ಇನ್ನೂ ಮನೆ ಬಿದ್ದಿರುವ ಸ್ಥಳಗಳಿಗೆ ಪಿಡಿಒ ಮತ್ತು ಎಂಜಿನಿಯರ್‌ಗಳು ಭೇಟಿ ನೀಡಿ ವರದಿ ಕೂಡ ಮಾಡಿದ್ದಾರೆ. ಕೊನೆಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಎಷ್ಟು ಪರ್ಸಂಟೇಜ್ ನಷ್ಟು ಹಾನಿಯಾಗಿದೆ ಎಂದು ವರದಿ ನೀಡಿ ಚೆಕ್ ಕೊಡಬೇಕಾಗಿದೆ. ಆದರೆ ಗ್ರಾಮ ಲೆಕ್ಕಾಧಿಕಾರಿ ಬೇಜವಾಬ್ದಾರಿಯಿಂದ ಇಪ್ಪತ್ತಕ್ಕೂ ಅಧಿಕ ಕುಟುಂಬಗಳಿಗೆ ಈವರೆಗೂ ಹತ್ತು ಸಾವಿರ ರೂ.ಯ ಚೆಕ್‍ಗಳೇ ಸಿಕ್ಕಿಲ್ಲ. ಅಷ್ಟೇ ಅಲ್ಲದೆ ಬೆಳೆಹಾನಿ ಕುರಿತು ವರದಿ ಕೂಡ ನೀಡುತ್ತಿಲ್ಲ. ಇದನ್ನೂ ಓದಿ:ನೆರೆ ‘ಪೀಡಕರು’- ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂತ್ರಸ್ತರಿಗೆ ತಲುಪುತ್ತಿಲ್ಲ ಪರಿಹಾರ
Advertisement
Advertisement
ಈ ಕುರಿತು ಗ್ರಾಮ ಲೆಕ್ಕಾಧಿಕಾರಿ(ವಿಎ) ರವಿಕುಮಾರ್ ಕಾಂಬ್ಳೆಗೆ ಕೇಳಿದರೆ ನೀವು ಯಾರಿಗೆ ಬೇಕಾದ್ರೂ ಹೇಳಿ ನಾನು ವರದಿ ಕೊಡುವುದಿಲ್ಲ ಎಂದು ಅವಾಜ್ ಹಾಕುತ್ತಿದ್ದಾನೆ. ಅಷ್ಟೇ ಅಲ್ಲದೆ ಆತನಿಗೆ ಯಾರು ಲಂಚ ಕೊಡುತ್ತಾರೆ ಅಂತವರಿಗೆ ಚೆಕ್ ಕೊಡುತ್ತಿದ್ದಾನೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಇದರಿಂದ ಏನು ಮಾಡಬೇಕೆಂದು ತೋಚದೆ ಗ್ರಾಮಸ್ಥರು ಕಂಗಾಲಾಗಿದ್ದು, ನಮಗೆ ಪರಿಹಾರ ಕೊಡಿಸಿ ಎಂದು ಗೋಗರೆಯುತ್ತಿದ್ದಾರೆ.
ಸವದತ್ತಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮಲಪ್ರಭಾ ನದಿ ಪ್ರವಾಹಕ್ಕೆ ಸಿಕ್ಕಿ ಸಂಕಷ್ಟ ಎದುರಿಸುತ್ತಿರುವ ಅನೇಕ ಕುಟುಂಬಗಳಿಗೆ ಪರಿಹಾರ ಸಿಕ್ಕಿಲ್ಲ. ಇತ್ತ ಅಧಿಕಾರಿಗಳು ಸ್ಥಳಕ್ಕೆ ಹೋಗದೆ ಯಾರು ಲಂಚ ಕೊಡುತ್ತಿದ್ದಾರೆ ಅಂತವರಿಗೆ ಪರಿಹಾರ ಕೊಡುವ ಕೆಲಸ ಮಾಡುತ್ತಿದ್ದಾರೆ. ಎಷ್ಟರ ಮಟ್ಟಿಗೆ ಅಧಿಕಾರಿಗಳು ಬೇಜವಾಬ್ದಾರಿ ಮೆರೆದಿದ್ದಾರೆ ಎಂದರೆ, ಈ ದುಂಡನಕೊಪ್ಪ ಗ್ರಾಮದ ವಿಎ ರವಿಕುಮಾರ್ ಸ್ಥಳಕ್ಕೆ ಹೋಗಿ ವಿಚಾರಿಸದೆ ಅದೇ ಗ್ರಾಮದ ಫಕ್ಕೀರ್ ಗೌಡ ಅವರು ಮರಣ ಹೊಂದಿದ್ದಾರೆ ಎಂದು ದಾಖಲೆ ನೀಡಿದ್ದಾನೆ. ಇದನ್ನ ನೋಡಿದ ಸ್ಥಳೀಯರು ಆತನನ್ನ ತರಾಟೆಗೆ ತೆಗೆದುಕೊಂಡ ಮೇಲೆ ಅದೇ ದಾಖಲೆಯನ್ನ ತಿದ್ದುಪಡಿ ಮಾಡಿಕೊಟ್ಟಿದ್ದಾನೆ ಎಂದು ಸಂತ್ರಸ್ತರು ತಿಳಿಸಿದ್ದಾರೆ.
ಇದು ಗ್ರಾಮೀಣ ಭಾಗದ ಸ್ಥಿತಿ ಆದರೆ ಅತ್ತ ನಗರದಲ್ಲೂ ಕೂಡ ಬಾಡಿಗೆ ಮನೆಯಲ್ಲಿದ್ದ ಬಹುತೇಕ ಸಂತ್ರಸ್ತರಿಗೆ ಇನ್ನೂ ಹತ್ತು ಸಾವಿರ ಚೆಕ್ ಸಿಗುತ್ತಿಲ್ಲ. ಮನೆಗಳು ಧರೆಗುರುಳಿ ಇದ್ದ ಸಾಮಾಗ್ರಿಗಳೆಲ್ಲವೂ ಮನೆಯಲ್ಲೇ ಬಿದ್ದಿವೆ. ಸರ್ವೆ ಮಾಡುವವರೆಗೂ ಅವುಗಳನ್ನ ತೆರವು ಮಾಡಬಾರದು ಎಂದಿದ್ದಕ್ಕೆ ಎರಡು ತಿಂಗಳಿಂದ ಸಾಮಾಗ್ರಿ ತೆಗೆಯದೇ ಜನರು ಸುಮ್ಮನಿದ್ದಾರೆ. ನಗರದ ಪಾಟೀಲ್ ಮಾಳದಲ್ಲಿರುವ ರಫೀಕ್ ಅವರು ಮನೆ ಕಳೆದುಕೊಂಡು, ಮನೆ ಸಾಮಾಗ್ರಿ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಆದರೆ ಇಲ್ಲಿಯವರೆಗೂ ಅಧಿಕಾರಿಗಳು ಬಂದು ಸರ್ವೆ ಮಾಡುತ್ತಿಲ್ಲ. ಇವರಿಗೆ ಪರಿಹಾರ ಕೊಡುತ್ತಿಲ್ಲ. ಈ ಕುರಿತು ಡಿಸಿಎಂ ಲಕ್ಷ್ಮಣ ಸವದಿ ಅವರನ್ನ ಕೇಳಿದರೆ ಕೆಲವರಿಗೆ ಇನ್ನೂ ಚೆಕ್ ಸಿಕ್ಕಿಲ್ಲ, ಆದಷ್ಟು ಬೇಗ ಅವರಿಗೆ ಪರಿಹಾರ ನೀಡಲಾಗುವುದು. ಯಾರಾದರು ಅಧಿಕಾರಿಗಳು ಬೇಜವಾಬ್ದಾರಿ ತೋರಿದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಪ್ರವಾಹ ಬಂದು ಹೋದ ಮೇಲೆ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಜೊತೆಗೆ ಮೂರು ಬಾರಿ ಸಿಎಂ ಯಡಿಯೂರಪ್ಪ ಈ ಪ್ರದೇಶಕ್ಕೆ ಭೇಟಿಕೊಟ್ಟು ಹೋಗಿದ್ದಾರೆ. ಆದರೆ ಇವರು ಬಂದು ಹೋದ ಮೇಲೆಯೂ ಹತ್ತು ಸಾವಿರ ರೂ. ಕೊಡುವುದಕ್ಕೆ ಸರ್ಕಾರ ಮೀನಾಮೇಷ ಮಾಡುತ್ತಿದೆ. ಇತ್ತ ಅಧಿಕಾರಿಗಳು ಕೂಡ ಬೇಜವಾಬ್ದಾರಿ ತೋರಿ ಸಂತ್ರಸ್ತರನ್ನ ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಸಂತ್ರಸ್ತರಿಗೆ ಹತ್ತು ಸಾವಿರ ಜೊತೆಗೆ ಸಂಪೂರ್ಣ ಪರಿಹಾರ ಕೊಡುವ ಕೆಲಸ ಮಾಡಬೇಕಿದೆ.