– ನಮಗೆ ದನಗಳು ಮತ ಹಾಕಿಲ್ಲ, ಜನಗಳೇ ಹಾಕಿದ್ದು
ವಿಜಯಪುರ: ನಾವು ಸಂಸದರು ಭಿಕಾರಿಗಳಲ್ಲ, ಎಂಪಿಗಳು ಅಂದರೆ ಪುಕ್ಕಟ್ಟೆ ಬಿದ್ದಿಲ್ಲ. ಮತ ಹಾಕಿದವರು, ಹಾಕದಿದ್ದವರು ಸೇರಿ ನಮ್ಮನ್ನು ಬೈದರೆ ನಮ್ಮ ಗತಿ ಹೇಗೆ ಎಂದು ಸಂಸದ ರಮೇಶ್ ಜಿಗಜಿಣಗಿ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಸಂಸದರು ಸ್ವಾಭಿಮಾನಿಗಳಿದ್ದೇವೆ. ನಾವೂ ನಿಮ್ಮಂತೆ ಮನುಷ್ಯರೇ ಇದ್ದೇವೆ. ಸ್ಪಂದನೆ ನೀಡುತ್ತಿಲ್ಲ ಎಂದರೆ ನಿಮಗೆಲ್ಲ ಹೇಳಿ ಮಾಡಬೇಕೇ? ಪ್ರವಾಹ ಪರಿಹಾರ ಕಾರ್ಯ ಎಂದರೆ ನಮ್ಮ ಮನೆ ಕೆಲಸ ಇದ್ದಂತೆ ನಾವು ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ನಮಗೇನು ದನಗಳು ಮತ ಹಾಕಿಲ್ಲ, ಜನಗಳೇ ಓಟು ಹಾಕಿದ್ದಲ್ಲವೇ? ಮೋದಿ ಸರ್ಕಾರ ಬೇಕು ಎಂದು ಮತ ಹಾಕಿದ್ದೀರಿ, ಸ್ವಲ್ಪ ಸಮಾಧಾನದಿಂದ ಕಾಯಿರಿ. ನಾವು ಇದನ್ನು ಸಾರ್ವಜನಿಕವಾಗಿ ಹೇಳಿಲ್ಲ ಅಷ್ಟೇ ಎಲ್ಲಿ ಹೇಳಬೇಕೋ ಅಲ್ಲಿ ಹೇಳಿದ್ದೇವೆ. ನಿನ್ನೆಯೂ ಸಹ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಹಾಗೂ ಡಿ.ವಿ.ಸದಾನಂದಗೌಡರ ಜೊತೆ ಕರೆ ಮಾಡಿ ಮಾತನಾಡಿದ್ದೇನೆ. ಈ ರೀತಿ ಸುಮ್ಮನೆ ಅಪವಾದಗಳು ಬರುತ್ತಿವೆ. ಪ್ರಧಾನಿಗಳ ಭೇಟಿಗೆ ಸಮಯ ತೆಗೆದುಕೊಂಡು ಎಲ್ಲ ಸಂಸದರ ನಿಯೋಗ ಹೋಗೋಣ ಎಂದು ಕೇಳಿಕೊಂಡಿದ್ದೇನೆ. ಪರಿಹಾರ ಕೊಡಬಾರದು ಎನ್ನುವುದು ಯಾರ ಅಭಿಪ್ರಾಯವೂ ಇಲ್ಲ. ಕೊಡಬೇಕು ಕೊಡುತ್ತೇವೆ ಎಂದು ಹೇಳಿದ್ದಾರೆ. ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡುತ್ತಾರೆ ಎಂದು ಮುಖ್ಯಮಂತ್ರಿಗಳು ಸಹ ಹೇಳಿದ್ದಾರೆ ಎಂದು ತಿಳಿಸಿದರು.
Advertisement
ಈ ಹಿಂದೆ ಕೇಂದ್ರ ಗೃಹ ಸಚಿವ ಅಮೀತ್ ಶಾ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಂದಿದ್ದಾರೆ. ಪ್ರಧಾನಿ ಯಾಕೆ ಸ್ಪಂದಿಸಿಲ್ಲ ನನಗೆ ಗೊತ್ತಿಲ್ಲ. ಬಿಹಾರ, ಯುಪಿಗೆ ಸ್ಪಂದಿಸಿದ್ದನ್ನೇ ನಮಗೆ ಎಂದು ತಿಳಿದುಕೊಳ್ಳಬೇಕು.
Advertisement
ಕೇಂದ್ರದಿಂದ ಪರಿಹಾರ ಕೊಡುವುದಿಲ್ಲ ಎಂದು ಹೇಳಿಲ್ಲ. ಸರ್ಕಾರ ನಮ್ಮದೇ ಇದೆ, ನಾವು ಬಹಿರಂಗವಾಗಿ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ಈಗಾಗಲೇ ಸಂಸದರೆಲ್ಲ ಸೇರಿ ಪ್ರಧಾನಿಗೆ ಹೇಳಿದ್ದೇವೆ. ಕೆಲವರು ಇದೇ ವಿಚಾರವನ್ನು ಅಪಪ್ರಚಾರ ಮಾಡಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ ಎಂದು ಕಿಡಿ ಕಾರಿದ್ದಾರೆ.