ಚಿಕ್ಕೋಡಿ/ಬೆಳಗಾವಿ: ಕೃಷ್ಣಾ ನದಿ ಪ್ರವಾಹಕ್ಕೆ ಸಿಕ್ಕ ಗ್ರಾಮಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿದ್ದವು. ಸಾವಿರ ಮನೆಗಳ ಪೈಕಿ ಬಹುತೇಕ ಮನೆಗಳು ಧರೆಗುರುಳಿದ್ದವು. ಸ್ವತಃ ವಸತಿ ಸಚಿವರು ಕಳೆದ ಮೂರು ತಿಂಗಳ ಹಿಂದೆ ಗ್ರಾಮಕ್ಕೆ ಭೇಟಿ ನೀಡಿ ಮನೆ ಕಟ್ಟಿಕೊಡುವ ಭರವಸೆ ನೀಡಿ, ಗುದ್ದಲಿ ಪೂಜೆ ಮಾಡಿಹೋಗಿದ್ದರು. ಆದರೆ ಅದೇ ಗ್ರಾಮದಲ್ಲಿ ಜನರು ಸೂರಿಗಾಗಿ ಇನ್ನೂ ಪರಿತಪ್ಪಿಸುತ್ತಿದ್ದಾರೆ.
ಸಚಿವರು ನೀಡಿದ ಭರವಸೆ ಹುಸಿಯಾಗಿದ್ದು, ಕೃಷ್ಣಾ ನದಿ ತೀರದ ಜನ ಸರ್ಕಾರದ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಕಳೆದ ಐದು ತಿಂಗಳ ಹಿಂದೆ ಬಂದಿದ್ದ ಕೃಷ್ಣಾ ನದಿ ಪ್ರವಾಹ ನೆನಪಾದರೆ ಈ ಭಾಗದ ಜನ ಈಗಲೂ ಭಯಬೀಳುತ್ತಾರೆ. ಇಂತಹ ಪರಿಸ್ಥಿತಿಯನ್ನು ಎದುರಿಸಿದ ಕುಟುಂಬಗಳು ಇಂದಿಗೂ ಬೀದಿಯಲ್ಲಿವೆ. ಪರಿಹಾರ ಸಿಗದೆ ಕಂಗಾಲಾಗಿರುವ ಸಂತ್ರಸ್ತರು ಮನೆ ಕಟ್ಟಿಕೊಳ್ಳುವುದು ಹೇಗೆ ಜೀವನ ನಡೆಸುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಇದನ್ನೂ ಓದಿ: ರಾಜ್ಯಕ್ಕೆ 1869.85 ಕೋಟಿ ನೆರೆ ಪರಿಹಾರ ಬಿಡುಗಡೆ
Advertisement
Advertisement
ಸರ್ಕಾರ ಅರ್ಧ ಪರಿಹಾರ ಕೊಟ್ಟು ಕೈತೊಳೆದುಕೊಳ್ಳುವ ಕೆಲಸ ಮಾಡಿದ್ದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಕಾಗವಾಡ, ಅಥಣಿ, ನಿಪ್ಪಾಣಿ ಸೇರಿದಂತೆ ಸಾಕಷ್ಟು ತಾಲೂಕುಗಳಲ್ಲಿ ಹಾನಿಯಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ, ಮಾಂಜರಿ ಗ್ರಾಮಗಳು ಊರಿಗೆ ಊರೇ ಮುಳುಗಡೆಯಾಗಿ ಸುಮಾರು 1,500ಕ್ಕೂ ಹೆಚ್ಚು ಮನೆಗಳು ಧರೆಗುರುಳಿದ್ದವು. ಈ ಪೈಕಿ 700ಕ್ಕೂ ಅಧಿಕ ನೆರೆ ಸಂತ್ರಸ್ತ ಕುಟುಂಬಗಳಿಗೆ ಮನೆ ಕಟ್ಟಿಕೊಳ್ಳಲು ಇನ್ನೂ ಪರಿಹಾರ ಬಂದಿಲ್ಲ. ದುರ್ಘಟನೆ ಸಂಭವಿಸಿ ಮೂರು ತಿಂಗಳು ಕಳೆದರೂ ಪರಿಹಾರ ಬಾರದ್ದರಿಂದ ಜನ ಕಂಗಾಲಾಗಿದ್ದಾರೆ. ಇದನ್ನೂ ಓದಿ: ಪ್ರವಾಹ ಪೀಡಿತ ಪ್ರದೇಶದಿಂದ ನಾಲ್ಕು ತಾಲೂಕುಗಳಿಗೆ ಸರ್ಕಾರದಿಂದ ಕೊಕ್
Advertisement
Advertisement
ಸರ್ಕಾರವೇ ಹೇಳಿದ ಪ್ರಕಾರ ಮನೆ ಬಿದ್ದವರಿಗೆ ಮನೆ ಕಟ್ಟಿಕೊಳ್ಳುವ ವರೆಗೆ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿಕೊಡಬೇಕಿತ್ತು. ಆದರೆ ಈ ಗ್ರಾಮದಲ್ಲಿ ವಸತಿ ಸಚಿವರು ಬರುತ್ತಾರೆ ಎಂಬ ಕಾರಣಕ್ಕೆ ಅಧಿಕಾರಿಗಳು ಅಂದು ಸಮುದಾಯ ಭವನದಲ್ಲೇ ತಗಡಿನ ಶೆಡ್ ಗಳ ನಿರ್ಮಾಣ ಮಾಡಿ ಸಚಿವರ ಮುಂದೆ ಕೆಲಸ ಮಾಡುತ್ತಿದ್ದೇವೆ ಎಂದು ತೋರಿಸಿಕೊಳ್ಳುವ ಕೆಲಸ ಮಾಡಿದ್ದರು. ಸಚಿವರು ಬಂದು ಹೋಗುತ್ತಿದ್ದಂತೆ ನೆರೆ ಸಂತ್ರಸ್ತರನ್ನು ಸಮುದಾಯ ಭವನ ಬಿಡಿಸಿದ್ದು, ಈಗ ಶೆಡ್ ಗಳು ಇಲ್ಲ ಇತ್ತ ಮನೆಗಳು ಇಲ್ಲದೆ ಬಹುತೇಕರು ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಇನ್ನೂ ಕೆಲವರು ಊರು ಬಿಟ್ಟಿದ್ದಾರೆ.
ಸ್ಥಳಕ್ಕೆ ಬಂದು ಸರ್ವೇ ಮಾಡಬೇಕಿದ್ದ ಅಧಿಕಾರಿಗಳು ಆರಂಭದಲ್ಲಿ ಬಂದು ಹೆಸರು ಬರೆದುಕೊಂಡು ಹೋಗಿದ್ದು ಬಿಟ್ಟರೆ ಯಾವುದೇ ಕೆಲಸ ಆಗಿಲ್ಲ. ಪರಿಹಾರ ಕೇಳಿದರೆ ಇಂದು ಬರುತ್ತೆ ನಾಳೆ ಬರುತ್ತೆ ಎಂದು ಹೇಳುತ್ತಾ ದಿನಗಳೆಯುತ್ತಿದ್ದಾರೆ. ಸಂತ್ರಸ್ತರ ಸ್ಥಿತಿ ನೋಡಿ ಆಕ್ರೋಶಗೊಂಡಿರುವ ಕನ್ನಡ ಸಂಘಟನೆಗಳು ಸರ್ಕಾರ ಪರಿಹಾರ ನೀಡದೆ ಇದ್ದಲ್ಲಿ ಸಂತ್ರಸ್ತರ ಜೊತೆಗೆ ಸರ್ಕಾದ ವಿರುದ್ಧ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿವೆ.