ಬಳ್ಳಾರಿ: ಕೊಡಗು, ಕೇರಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಪರಿಸ್ಥಿತಿಗೆ ನಾಡಿನ ಜನರು ಸಾಕಷ್ಟು ನೆರವು ನೀಡಿದ್ದಾರೆ. ಸಂತ್ರಸ್ತರಿಗಾಗಿ ಸಾವಿರಾರು ಜನರು ಆಹಾರ ಧಾನ್ಯ, ದವಸ, ಬಟ್ಟೆ ಬರೆ, ಔಷಧಿಗಳನ್ನು ಸಂತ್ರಸ್ತರಿಗಾಗಿ ನೀಡಿದ್ದಾರೆ. ಆದರೆ ಸಂತ್ರಸ್ತರಿಗೆ ತಲುಪಬೇಕಾಗಿದ್ದ ರಾಶಿ ರಾಶಿ ವಸ್ತುಗಳು ಇದೀಗ ಬಳ್ಳಾರಿಯ ಗೋದಾಮವೊಂದರಲ್ಲಿ ಕೊಳೆಯುತ್ತಿವೆ.
ಕೊಡಗು ಹಾಗೂ ಕೇರಳ ಸಂತ್ರಸ್ತರಿಗೆ ವಸ್ತುಗಳನ್ನು ತಲುಪಿಸಲು ಲಾರಿ ಸಿಗಲಿಲ್ಲ ಅಂತಾ ಬಳ್ಳಾರಿ ಜಿಲ್ಲಾಡಳಿತ ಕೈ ಚೆಲ್ಲಿ ಕುಳಿತಿದೆ. ಬಳ್ಳಾರಿ ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಇದೀಗ ರಾಜ್ಯದ ಜನರು ಹಿಡಿಶಾಪ ಹಾಕುವಂತಾಗಿದೆ. ಏಕೆಂದರೆ ಕೊಡಗು ಹಾಗೂ ಕೇರಳದಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿಯಿಂದ ನಲುಗಿದ ಸಂತ್ರಸ್ತರಿಗಾಗಿ ಬಳ್ಳಾರಿಯ ಸಾವಿರಾರು ಜನರು ಸಾಕಷ್ಟು ದವಸ, ಧಾನ್ಯ, ಬಟ್ಟೆ, ಬರೆ, ಔಷಧಿ ಸೇರಿದಂತೆ ದಿನನಿತ್ಯ ಬಳಕೆಯ ವಸ್ತುಗಳನ್ನು ನೀಡಿದ್ದರು. ಆದರೆ ಬಳ್ಳಾರಿ ಜಿಲ್ಲಾಡಳಿತ ಸಂತ್ರಸ್ತರಿಗಾಗಿ ತಲುಪಿಸಬೇಕಾದ ಸಾಮಾಗ್ರಿಗಳನ್ನು ಗೊದಾಮಿನಲ್ಲಿಟ್ಟು ನಿರ್ಲಕ್ಷ್ಯ ವಹಿಸಿದ ಪರಿಣಾಮ ಸಂತ್ರಸ್ತರಿಗೆ ತಲುಪಬೇಕಿದ್ದ ಸಾಮಾಗ್ರಿಗಳು ಗೋದಾಮಿನಲ್ಲೆ ಕೊಳೆಯುವಂತಾಗಿದೆ.
ಸಂತ್ರಸ್ತರಿಗಾಗಿ ಸಾವಿರಾರು ಜನರು ತಮ್ಮ ದುಡಿದ ದುಡಿಮೆಯಲ್ಲೇ ಸಾಕಷ್ಟು ಸಾಮಾಗ್ರಿಗಳನ್ನು ನೀಡಿದ್ದರು. ಇನ್ನೂ ಕೆಲವರು ಅಲ್ಪ ಸ್ವಲ್ಪ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೆರವು ನೀಡಿದ್ದರು. ಅಲ್ಲದೇ ಸಿಎಂ ಪರಿಹಾರ ನಿಧಿಗೆ ನೀಡಿದ ಸುಮಾರು 7 ಲಕ್ಷ ರೂ. ಗೂ ಅಧಿಕ ಮೊತ್ತದ ಚೆಕ್‍ಗಳನ್ನು ಸಹ ಮುಖ್ಯಮಂತ್ರಿಗಳ ಪರಿಹಾರ ನಿಧಿ ಅಕೌಂಟ್‍ಗೆ ತಲುಪಿಸದೇ ನಿರ್ಲಕ್ಷ್ಯ ವಹಿಸಿರುವುದು ನಿಜಕ್ಕೂ ದುರಂತಮಯವಾಗಿದೆ. ಈ ಕುರಿತು ಗೃಹರಕ್ಷಕ ದಳದ ಅಧಿಕಾರಿಯನ್ನು ಪ್ರಶ್ನೆ ಮಾಡಿದರೆ ಸಾಮಾಗ್ರಿಗಳನ್ನು ಸಾಗಿಸಲು ಲಾರಿ ಸಿಗಲಿಲ್ಲ. ನಾಳೆ ನಾಡಿದು ಕಳುಹಿಸುತ್ತೇವೆ ಅಂತಾ ನಿರ್ಲಕ್ಷ್ಯತನದ ಉತ್ತರ ನೀಡುತ್ತಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಸಾವಿರಾರು ಲಾರಿಗಳಿದ್ದರೂ ಜಿಲ್ಲಾಡಳಿತಕ್ಕೆ ಮಾತ್ರ ಸಂತ್ರಸ್ತರ ಸಾಮಾಗ್ರಿಗಳನ್ನು ಸಾಗಿಸಲು ಒಂದು ಲಾರಿಯೂ ಸಹ ಸಿಗಲಿಲ್ಲ ಅನ್ನೋದು ನಿಜಕ್ಕೂ ದುರಂತಮಯವಾಗಿದೆ. ಹೀಗಾಗಿ ಬಳ್ಳಾರಿ ಜಿಲ್ಲೆಯ ಜನರು ಇದೆಂಥ ಜಿಲ್ಲಾಡಳಿತ. ಇವರೆಂಥಾ ಜಿಲ್ಲಾಧಿಕಾರಿ ಅಂತಾ ಹಿಡಿಶಾಪ ಹಾಕುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv