ಮಹಾಮಳೆ ತಂದ ಆಪತ್ತು- ಇಲಿ ಜ್ವರಕ್ಕೆ 25 ಮಂದಿ ಸಾವು

Public TV
2 Min Read
kerala flood F

ತಿರುವನಂತಪುರಂ: ಮಹಾಮಳೆಯ ಪ್ರವಾಹದಿಂದ ತತ್ತರಿಸಿದ್ದ ಕೇರಳ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದು, ಈ ವೇಳೆಯೇ ಇಲಿ ಜ್ವರದ ಭೀತಿ ಶುರುವಾಗಿದೆ. ಕಳೆದ 1 ತಿಂಗಳಿನಲ್ಲಿ ಇಲಿ ಜ್ವರಕ್ಕೆ 28 ಮಂದಿ ಸಾವನ್ನಪ್ಪಿದ್ದು, 1 ವಾರದಲ್ಲೇ 9 ಮಂದಿ ಶಂಕಿತ ಜ್ವರಕ್ಕೆ ಬಲಿಯಾಗಿದ್ದಾರೆ.

ಕೇರಳದ ಕೊಯಿಕ್ಕೋಡ್ ಜಿಲ್ಲೆಯಲ್ಲಿ ಇಲಿ ಜ್ವರಕ್ಕೆ ಶನಿವಾರ ಮೂವರು ಬಲಿಯಾಗಿದ್ದು, ಪ್ರವಾಹ ರಕ್ಷಣಾ ಪರಿಹಾರ ಕಾರ್ಯದಲ್ಲಿ ತೊಡಗಿದ್ದ ಆಂಡಿ, ಶಿವದಾಸನ್ ಹಾಗೂ ಕೃಷ್ಣನ್ ಎಂಬವರು ಕೋಯಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಸೋಕಿನಿಂದ ಸಾವನ್ನಪ್ಪಿದ್ದಾರೆ. ಇನ್ನು ಜಿಲ್ಲೆಯೊಂದರಲ್ಲೇ ಮಹಾಮಾರಿಗೆ ಬಲಿಯಾದವರ ಸಂಖ್ಯೆ 20ಕ್ಕೆ ತಲುಪಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

kerala3 1

ಕಳೆದ ಮೂರು ದಿನಗಳಲ್ಲಿ 300 ಶಂಕಿತ ಇಲಿ ಜ್ವರ ಪ್ರಕರಣಗಳು ಪತ್ತೆಯಾಗಿದೆ ಎಂದು ಜಿಲ್ಲಾ ಹಿರಿಯ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ. ಕೇರಳ ಆರೋಗ್ಯ ಇಲಾಖೆ ಇಲಿ ಜ್ವರದ ಬಗ್ಗೆ ಕೋಯಿಕ್ಕೋಡ್, ಪಾಲಕ್ಕಾಡ್, ತ್ರಿಶ್ಶೂರ್, ಮಲಪ್ಪುರಂ, ಎರ್ನಾಕುಲಂ ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ. ಅಲ್ಲದೇ ಹೆಚ್ಚುವರಿ ಔಷಧ ಹಾಗೂ ವೈದ್ಯಕೀಯ ನೆರವಿಗಾಗಿ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಮನವಿ ಸಲ್ಲಿಸಿದೆ.

ಇಲಿ ಜ್ವರ ಹೇಗೆ ಬರುತ್ತೆ?
ಮನುಷ್ಯನ ಸಂಪರ್ಕಕ್ಕೆ ಸಮೀಪವಿರುವ ಪ್ರದೇಶದಲ್ಲಿ ವಾಸಿಸುವ ಇಲಿ, ಹೆಗ್ಗಣ, ಬೆಕ್ಕು, ನಾಯಿ, ಹಸು ಸೇರಿದಂತೆ ಕೆಲ ಕಾಡು ಪ್ರಾಣಿಗಳ ದೇಹದಲ್ಲಿರುವ ವೈರಸ್ ಮೂತ್ರದ ಮೂಲಕ ನೀರಿನಲ್ಲಿ ಸೇರುತ್ತದೆ. ಇಂಥ ಕಲುಷಿತ ನೀರು ಮನುಷ್ಯರ ದೇಹದ ಸಂಪರ್ಕಕ್ಕೆ ಬಂದಾಗ ವೈರಸ್ ಶರೀರದಲ್ಲಿ ಸೇರ್ಪಡೆಯಾಗಿ 4 ರಿಂದ 19 ದಿನಗಳಲ್ಲಿ ವ್ಯಕ್ತಿ ಆನಾರೋಗ್ಯಕ್ಕೆ ಒಳಗಾಗುತ್ತಾರೆ. ಈ ಜ್ವರಕ್ಕೆ ಮೂಲ ಕಾರಣ ಝೂನೋಟಿಕ್ ವೈರಸ್ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

kerala woman

ಲಕ್ಷಣಗಳು: ಜ್ವರ, ಮೈಕೈ ನೋವು ಹಾಗೂ ತಲೆನೋವು ಕೆಲವರಲ್ಲಿ ಜಾಂಡೀಸ್ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಅಲ್ಲದೇ ಬಾಯಿ, ಮೂಗು ಭಾಗಗಳಲ್ಲಿ ರಕ್ತಸ್ರಾವವಾಗುವ ಸಾಧ್ಯತೆಗಳು ಇದೆ. ಈ ಸೋಂಕು ಮೂತ್ರ ಪಿಂಡಕ್ಕೂ ವಿಸ್ತರಿಸಿ ಮೂತ್ರ ವಿಸರ್ಜನೆ ಪ್ರಮಾಣ ಕಡಿಮೆಯಾಗಬಹುದಾಗಿದೆ.

ಲಕ್ಷಣ ಕಾಣಿಸಿಕೊಂಡ್ರೆ ಏನು ಮಾಡಬೇಕು?
ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಬಹುಬೇಗ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖರಾಗಬಹುದು. ಇಲಿ ಜ್ವರ ದೃಢವಾದ ಬಳಿಕ ತಜ್ಞ ವೈದ್ಯರಿಂದ ಕ್ರಮಬದ್ಧ ಚಿಕಿತ್ಸೆ ಪಡೆಯುವುದು ಅಗತ್ಯವಾಗಿರುತ್ತದೆ. ಮುಖ್ಯವಾಗಿ ಸೋಂಕಿಗೆ ಒಳಗಾಗಿರುವ ವ್ಯಕ್ತಿಯಿಂದ ಆರೋಗ್ಯವಂತ ವ್ಯಕ್ತಿಗೆ ಸೋಂಕು ಹರಡುವುದಿಲ್ಲ.

ಮುನ್ನೆಚ್ಚರಿಕೆ ಕ್ರಮ: ಕುಡಿಯಲು, ಸ್ನಾನ ಮಾಡಲು ಹಾಗೂ ದಿನನಿತ್ಯದ ಬಳಕೆಗೆ ಶುದ್ಧ ನೀರಿನ ಬಳಕೆ. ಸೋಂಕು ಕಾಣಿಸಿಕೊಂಡ ಪ್ರದೇಶದಲ್ಲಿ ಸಾಕು ಪ್ರಾಣಿಗಳನ್ನು ಕೊಳ, ಹೊಂಡ ಇನ್ನಿತರ ಸಾರ್ವಜನಿಕರ ಪ್ರದೇಶಗಳಲ್ಲಿ ಅವುಗಳ ಮೈ ತೊಳೆಯಬಾರದು. ಆಹಾರ ಪದಾರ್ಥಗಳ ರಕ್ಷಣೆ, ಮನೆಯ ಸುತ್ತಲು ನೈರ್ಮಲ್ಯ ಕಾಪಾಡಿಕೊಳ್ಳುವುದು. ಸೋಂಕು ಉಂಟಾದ ಪ್ರದೇಶದಲ್ಲಿ ಚಪ್ಪಲಿ ಧರಿಸಿ ಓಡಾಡುವುದು. ಜ್ವರದ ಬಂದ ಕೂಡಲೇ ನಿರ್ಲಕ್ಷ್ಯ ಮಾಡದೆ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳುವುದು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Kerala floods 1

Share This Article
Leave a Comment

Leave a Reply

Your email address will not be published. Required fields are marked *