ರಾಯಚೂರು: ಒಂದೆಡೆ ನೆರೆಹಾವಳಿಯಿಂದ ತತ್ತರಿಸಿದ್ದ ರಾಯಚೂರು ಜಿಲ್ಲೆಯ ಜನ ಈಗ ಮಳೆಯಿಂದ ಕಂಗಾಲಾಗಿದ್ದಾರೆ. ನೆರೆ ಹಾವಳಿಯಿಂದ ಕಳೆದುಕೊಂಡ ಆಸ್ತಿಪಾಸ್ತಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ, ಸರ್ಕಾರ ಕಷ್ಟಗಳಿಗೆ ಕಿವಿ ಕೊಡುತ್ತಿಲ್ಲ ಎನ್ನುವಾಗಲೇ ಜನ ಮತ್ತಷ್ಟು ಕಷ್ಟಗಳನ್ನ ಅನುಭವಿಸುತ್ತಿದ್ದಾರೆ. ನೀರಿನ ಬಸಿಯುವಿಕೆಯಿಂದ ಮನೆಗಳಲ್ಲಿ ನೀರಿನ ಗುಂಡಿಗಳು ಬೀಳುತ್ತಿದ್ದು ಜನ ಜೀವಭಯದಲ್ಲಿ ಗ್ರಾಮಗಳನ್ನೇ ಬಿಡಬೇಕಾದ ಪರಿಸ್ಥಿತಿ ಇದೆ.
ನೆರೆಯ ಮಹಾರಾಷ್ಟ್ರದಲ್ಲಿ ಸುರಿದ ಭಾರೀ ಮಳೆಗೆ ಕೃಷ್ಣಾ ನದಿ ಪ್ರವಾಹದಿಂದ ರಾಯಚೂರು ಜಿಲ್ಲೆಯ ನದಿ ಪಾತ್ರದ ಗ್ರಾಮಗಳ ಜನರು ನಿರಾಶ್ರಿತರಾಗಿದ್ದಾರೆ. ಮನೆಗಳು ಕುಸಿದು, ಬೆಳೆ ಹಾನಿಯಾಗಿ ಬೀದಿಗೆ ಬಂದಿದ್ದಾರೆ. ಆದರೆ ಸಂತ್ರಸ್ತರ ಕಣ್ಣೀರು ಒರೆಸಲು ಅಲ್ಪ ಸಹಾಯ ಮಾಡಿದ ಸರ್ಕಾರ ಈಗ ಸಂತ್ರಸ್ತರನ್ನ ಮರೆತೇ ಹೋಗಿದೆ. ಅಧಿಕಾರಿಗಳು ಯಾವುದಕ್ಕೂ ಸ್ಪಂದಿಸದೇ ಇರುವುದರಿಂದ ಸಂತ್ರಸ್ತರು ಕಂಗಾಲಾಗಿದ್ದಾರೆ. ಇದರ ನಡುವೆ ರಾಯಚೂರಿನ ಅರಶಿಣಿಗಿ ಸೇರಿದಂತೆ ಕೆಲ ನೆರೆಪೀಡಿತ ಗ್ರಾಮಗಳ ಮನೆಗಳಲ್ಲಿ ಇದ್ದಕ್ಕಿದ್ದ ಹಾಗೇ ಭೂಮಿ ಕುಸಿದು ಗುಂಡಿ ಬೀಳುತ್ತಿವೆ. ಹದಿನೈದು ಇಪ್ಪತ್ತು ಅಡಿ ಆಳದ ಗುಂಡಿ ನಿರ್ಮಾಣವಾಗುತ್ತಿದ್ದು ಜನ ಜೀವ ಭಯದಲ್ಲಿ ಮನೆಗಳನ್ನೇ ತೊರೆಯುತ್ತಿದ್ದಾರೆ. ಮಳೆಯಿಂದಾಗಿ ಅಂತರ್ಜಲ ಹೆಚ್ಚಾಗಿ ಎಲ್ಲೆಂದರಲ್ಲಿ ಭೂಮಿ ಕುಸಿದು ಗುಂಡಿ ಬೀಳುತ್ತಿವೆ ಎನ್ನಲಾಗಿದೆ.
Advertisement
Advertisement
ಜಿಲ್ಲೆಯಲ್ಲಿ ಎನ್‍ಡಿಆರ್‍ಎಫ್ ನಿಯಮದ ಪ್ರಕಾರ 38.96 ಕೋಟಿ ರೂ. ಹಾನಿಯಾಗಿದೆ. ಆದರೆ ಜಿಲ್ಲಾಡಳಿತ ಅಂದಾಜು ಮಾಡಿರುವ ಹಾನಿ ಪ್ರಮಾಣ 242.77 ಕೋಟಿ ರೂ. ಇದೆ. ಸದ್ಯ ನೆರೆ ನಿರ್ವಹಣೆಗೆ 20.67 ಕೋಟಿ ರೂ. ಬೇಕಿದ್ದು, ಜಿಲ್ಲಾಡಳಿತದ ವಿಪತ್ತು ನಿರ್ವಹಣೆ ಖಾತೆಯಲ್ಲಿದ್ದ 12.87 ಕೋಟಿ ರೂ. ಖರ್ಚಾಗಿದೆ. ಹೀಗಾಗಿ ಸದ್ಯ ತುರ್ತಾಗಿ 7. 80 ಕೋಟಿ ಹಣ ಜಿಲ್ಲೆಗೆ ಅಗತ್ಯವಿದೆ. ಮನೆಗಳಿಗೆ ನೀರು ನುಗ್ಗಿದ್ದ 543 ಸಂತ್ರಸ್ತರಿಗೆ ತಲಾ 10 ಸಾವಿರ ನೀಡಲಾಗಿದೆ. ಬಿದ್ದ ಮನೆಗಳಿಗೆ ತಲಾ 25 ಸಾವಿರ ರೂಪಾಯಿಯಂತೆ 73 ಮನೆಗಳಿಗೆ 19 ಲಕ್ಷ 50 ಸಾವಿರ ರೂ. ನೀಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
Advertisement
Advertisement
73 ಮನೆಗಳಲ್ಲಿ 8 ಸಂಪೂರ್ಣ, 16 ಭಾಗಶಃ, 49 ಮನೆಗಳು ಅಲ್ಪ ಹಾನಿಯಾಗಿವೆ ಎಂದು ಸಮೀಕ್ಷೆ ಮಾಡಲಾಗಿದೆ. ಆದರೆ ಸಮಿಕ್ಷೆ ಸರಿಯಾಗಿ ನಡೆಯುತ್ತಿಲ್ಲ ಎಂದು ಜನ ಆರೋಪಿಸಿದ್ದಾರೆ. ಇಂತಹದರಲ್ಲಿ ಭೂ ಕುಸಿತದಿಂದ ಮನೆಗಳು ಜಖಂಗೊಳ್ಳುತ್ತಿರುವುದು ಸಂತ್ರಸ್ತರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಬರಗಾಲದಿಂದ ತತ್ತರಿಸಿದ್ದ ರಾಯಚೂರು ಜಿಲ್ಲೆಗೆ ಬಂದ ನೆರೆಹಾವಳಿ ಜನ ಜೀವನವನ್ನೇ ಬುಡಮೇಲಾಗಿ ಮಾಡಿದೆ. ಈಗ ಸಾಕು ಎನ್ನುವ ಮಟ್ಟಿಗೆ ಬರುತ್ತಿರುವ ಮಳೆ ಮತ್ತೊಂದು ರೀತಿಯ ತೊಂದರೆಗಳಿಗೆ ಕಾರಣವಾಗುತ್ತಿದೆ. ಕನಿಷ್ಠ ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ.