ಬೆಳಗಾವಿ: ಪ್ರವಾಹದಿಂದ ತತ್ತರಿಸಿರುವ ಸಂತ್ರಸ್ತರ ಭೇಟಿಗೆ ಹೋಗಿದ್ದ ಸಂಸದ ಅನಂತಕುಮಾರ್ ಹೆಗಡೆ ಅವರು ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಸಂತ್ರಸ್ತರ ಮಾತು ಕೇಳದೆ ಅವರನ್ನು ನಿರ್ಲಕ್ಷಿಸಿ ಜನರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನೇಗಿನಹಾಳ ಗ್ರಾಮದ ಪರಿಹಾರ ಕೇಂದ್ರದಲ್ಲಿದ್ದ ನಿರಾಶ್ರಿತರನ್ನು ಭೇಟಿ ಮಾಡಲು ಅನಂತಕುಮಾರ್ ಹೆಗಡೆ ಅವರು ಹೋಗಿದ್ದರು. ಈ ವೇಳೆ ಮಲಪ್ರಭಾ ನದಿಯಿಂದ ಉಂಟಾದ ಪ್ರವಾಹಕ್ಕೆ ಮನೆಗಳನ್ನ ಕಳೆದುಕೊಂಡ ನಿರಾಶ್ರಿತರು, ದೂರದಿಂದ ನೋಡಲು ಮನೆಗಳು ಸರಿಯಾಗಿದೆ ಎಂದು ಕಾಣುತ್ತದೆ. ಆದರೆ ಮನೆಗಳ ಒಳಗೆ ಎಲ್ಲವೂ ಹಾನಿಯಾಗಿದೆ. ನಮಗೆ ಮನೆ ಕಟ್ಟಿಸಿಕೊಡಿ ಎಂದು ಕೇಳಿದ್ದಾರೆ. ಆದರೆ ಜನರ ಮಾತನ್ನು ಕೇಳದೆ, ಸರಿಯಾಗಿ ಸ್ಪಂದಿಸದೆ ಅನಂತ್‍ಕುಮಾರ್ ಅವರು ನಿರ್ಲಕ್ಷಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸಂತ್ರಸ್ತರು ಸಂಸದರನ್ನು ತರಾಟೆಗೆ ತೆಗೆದುಕೊಂಡರು.
Advertisement
Advertisement
ಅಲ್ಲದೆ ಪ್ರವಾಹದ ಬಗ್ಗೆ ಪ್ರತಿಕ್ರಿಯೆ ಕೇಳಿದ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಕೂಡ ಅನಂತ್‍ಕುಮಾರ್ ಅವರು ಕಿಡಿಕಾರಿದರು. ವಿಡಿಯೋ ಮಾಡುವುದನ್ನು ನಿಲ್ಲಿಸಿ ಎಂದಿದ್ದಾರೆ. ಹಾಗೆಯೇ ಮೊದಲೇ ಸಂಸದರ ನಡವಳಿಕೆಯಿಂದ ಸಿಟ್ಟಲಿದ್ದ ಸಂತ್ರಸ್ತ ಮಹಿಳೆಯರು ನಿನಗೆ ವೋಟ್ ಹಾಕುವುದಿಲ್ಲ ಎಂದು ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಕೂಡ ಮಹಿಳೆಯರ ಮಾತು ಕೇಳಿಯೂ ಕೇಳಿಸದಂತೆ ಅನಂತ್‍ಕುಮಾರ್ ಅವರು ಕುಳಿತ್ತಿದ್ದರು. ಹೀಗೆ ಗ್ರಾಮಸ್ಥರ ತೀವ್ರ ತರಾಟೆಗೆ ತೆಗೆದುಕೊಂಡ ನಂತರ ಬೇರೆ ಪರಿಹಾರ ಕೇಂದ್ರಕ್ಕೆ ಸಂಸದರು ತೆರಳಿದರು.