– ಶೀಘ್ರದಲ್ಲೆ ಉಡುಪಿ ಜಿಲ್ಲೆಗೆ 5 ಕೋಟಿ ಪರಿಹಾರ: ಭರವಸೆ
ಉಡುಪಿ: ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರಿಗೆ ಗುಜ್ಜರಬೆಟ್ಟು ಗ್ರಾಮಸ್ಥರ ಆಕ್ರೋಶದ ಬಿಸಿ ತಟ್ಟಿದೆ.
ಗುಜ್ಜರಬೆಟ್ಟು ಕಡಲಕೊರೆತಕ್ಕೊಳಗಾದ ಸ್ಥಳಕ್ಕೆ ಅವರು ಭೇಟಿ ಕೊಟ್ಟಿದ್ದರು. ಈ ವೇಳೆ, ದೂರದಿಂದಲೇ ಗುಡ್ಡ ಕುಸಿತ ಸ್ಥಳವನ್ನು ನೋಡಿ ವಾಪಸ್ಸಾಗಿದ್ದಕ್ಕೆ ಜನರು ತರಾಟೆ ತೆಗೆದುಕೊಂಡರು. ಅಲ್ಲದೇ ಉಡುಪಿಯಲ್ಲೇ ಇದ್ದು ಸಮಸ್ಯೆಗಳಿಗೆ ಸ್ಪಂದಿಸಲು ಗ್ರಾಮಸ್ಥರು ಒತ್ತಾಯಿಸಿದರು.
ಕಡಲ ಕೊರೆತದ ಜಾಗಕ್ಕೆ ಸೂಕ್ತ ಕಲ್ಲುಗಳನ್ನು ಸಮಸ್ಯೆಯಾದ ಸ್ಥಳದಲ್ಲಿ ಪರಿಶಿಷ್ಟ ಜಾತಿಯ ಮನೆಗಳಿದ್ದು, ಕಡಲ ಕೊರೆತದ ಮುನ್ಸೂಚನೆ ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಘಟನೆ ನಡೆದ ಆಸುಪಾಸಿನಲ್ಲೂ ಕಲ್ಲುಗಳನ್ನು ಜೋಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.
ಈ ಬಗ್ಗೆ ಮಾತನಾಡಿದ ಸಚಿವೆ ಹೆಬ್ಬಾಳ್ಕರ್, ಇಲ್ಲೇ ಮನೆ ಮಾಡಿ ಇರಲು ತಯಾರಿದ್ದೇನೆ. ನನಗೂ ಜವಾಬ್ದಾರಿ ಇದೆ, ಸೆಷನ್ ನಡಿತಾ ಇದೆ. ಇಂದು (ಭಾನುವಾರ) ರಜೆ ಇದ್ದಾಗಲೂ ಬಂದಿದ್ದೇನೆ. ನನ್ನ ಅವಶ್ಯಕತೆ ಇದ್ದಾಗ ಇಲ್ಲಿಗೆ ಬರುತ್ತೇನೆ. ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಎಚ್ಚರವಾಗಿದೆ. ಪರಿಹಾರ ಮೊತ್ತವನ್ನು ಸರ್ಕಾರ ಶೀಘ್ರ ಬಿಡುಗಡೆ ಮಾಡುತ್ತದೆ ಎಂದರು.
ಇದೇ ವೇಳೆ ಹಿಂದಿನ ಸರ್ಕಾರ 5 ಲಕ್ಷ ರೂ. ಹಾಗೂ ಈಗ 1.20 ಲಕ್ಷ ರೂ. ಪರಿಹಾರ ವಿಚಾರವಾಗಿ, ಕಳೆದ ಬಾರಿ ಮಳೆಯಾದಾಗ ಮನೆ ಬಿದ್ದರೆ 5 ಲಕ್ಷ ರೂ. ಕೊಟ್ಟಿದ್ದೇವೆ. ಈ ಬಾರಿ ತಕ್ಷಣ 5 ಕೋಟಿ ಬಿಡುಗಡೆಗೆ ಮನವಿ ಮಾಡಿದ್ದೇವೆ. ಜಿಲ್ಲೆಗೆ ಶೀಘ್ರದಲ್ಲೇ 5 ಕೋಟಿ ರೂ. ಪರಿಹಾರ ಬಿಡುಗಡೆಯಾಗುತ್ತದೆ ಎಂದರಲ್ಲದೇ ಬಿಜೆಪಿಯವರಿಗೆ (BJP) ಉತ್ತರ ಕೊಡಲು ನಾವು ಸಮರ್ಥರಾಗಿದ್ದೇವೆ. ಸಿಎಂ ಸಿದ್ದರಾಮಯ್ಯನವರು ಸಮರ್ಥರಿದ್ದಾರೆ. ಬಿಜೆಪಿಯವರು ಹತಾಶರಾಗಿ ಏನೇನೋ ಹೇಳುತ್ತಾರೆ ಎಂದರು.
ಉಡುಪಿ (Udupi) ಭಾಗದಲ್ಲಿ ಒಂದೂವರೆ ತಿಂಗಳಿನಿಂದ ಮಳೆಯಾಗುತ್ತಿದೆ. ಇದರಿಂದ ಜನ ಕಂಗಾಲಾಗಿದ್ದಾರೆ. ಬೈಂದೂರು ಸೇರಿದಂತೆ ಹಲವು ಭಾಗಗಳಲ್ಲಿ ನೆರೆ (Flood) ಪರಿಸ್ಥಿತಿಯಿಂದ ಜನ ಸಂಕಷ್ಟಕ್ಕೆ ಒಳಗಾಗಿದ್ದರು. ಇನ್ನೂ ಸಿಎಂ ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ ಕೊಟ್ಟಿದ್ದರು.