ನವದೆಹಲಿ: ದಟ್ಟ ಮಂಜು ಕವಿದ ಪರಿಣಾಮ ಹೊಸ ವರ್ಷದ ಮೊದಲ ದಿನವೇ ವಿಮಾನ ಹಾರಾಟದಲ್ಲಿ ವ್ಯತ್ಯವುಂಟಾಗಿ ನೂರಾರು ಪ್ರಯಾಣಿಕರು ಪರದಾಡಿದ ಘಟನೆ ನಡೆದಿದೆ. ಸತತ ನಾಲ್ಕು ಗಂಟೆಗಳ ಬಳಿಕ ವಿಮಾನ ಹಾರಾಟ ಪುನಾರಂಭವಾಗಿದೆ.
ದೆಹಲಿ ಮತ್ತು ಉತ್ತರ ಪ್ರದೇಶ ಈ ಎರಡೂ ಕಡೆಗಳಲ್ಲೂ ದಟ್ಟ ಮಂಜಿನಿಂದಾಗಿ ರೈಲು ಸೇವೆ ಕೂಡ ಕೆಲ ಗಂಟೆಗಳ ಕಾಲ ಸ್ಥಗಿತವಾಗಿತ್ತು. ಅಂತರಾಷ್ಟ್ರೀಯ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಬೆಳಗ್ಗೆ ಸುಮಾರು 6 ಗಂಟೆಯಿಂದಲೇ ನೂರಾರು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಸಿಲುಕಿಕೊಂಡ್ರು. ಮಂಜು ತಿಳಿಯಾದ ಬಳಿಕ ಅಂದ್ರೆ ಸುಮಾರು 11 ಗಂಟೆಯ ನಂತರ ನಿಲ್ದಾಣದಿಂದ ವಿಮಾನಗಳು ಟೇಕ್ ಆಫ್ ಆದವು. ದೆಹಲಿಗೆ ಆಗಮಿಸುವ ವಿಮಾನಗಳಲ್ಲೂ ವ್ಯತ್ಯಯ ಉಂಟಾಗಿತ್ತು. ಕೆಲವು ವಿಮಾನಗಳು ಮಾತ್ರ ಲ್ಯಾಂಡ್ ಆಗಲು ಸಾಧ್ಯವಾಗಿತ್ತು. ಹಲವು ವಿಮಾನಗಳು ಟೇಕ್ ಆಫ್ ಗಾಗಿ ಟಾಮ್ರ್ಯಾಕ್‍ನಲ್ಲಿ ಸಾಲುಗಟ್ಟಿ ನಿಂತಿದ್ದವು.
ವಿಮಾನ ಹಾರಾಟದ ವ್ಯತ್ಯಯದಿಂದಾಗಿ ಕಂಗಾಲಾಗಿದ್ದ ಪ್ರಯಾಣಿಕರು, ಖಚಿತ ಮಾಹಿತಿ ಹಾಗೂ ಸರಿಯಾಗಿ ಅನೌನ್ಸ್ ಮಾಡದಿರುವುದಕ್ಕೆ ರೊಚ್ಚಿಗೆದ್ದು ಏರ್ ಲೈನ್ಸ್ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸಿದ ಘಟನೆಯೂ ನಿಲ್ದಾಣದಲ್ಲಿ ನಡೆಯಿತು.
ಇನ್ನು 56 ರೈಲುಗಳು ದೆಹಲಿಗೆ ತಡವಾಗಿ ಆಗಮಿಸಿದ್ದು, 20 ರೈಲುಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಇನ್ನು 15 ರೈಲುಗಳನ್ನು ರದ್ದುಪಡಿಸಲಾಗಿದೆ ಎಂದು ಉತ್ತರ ರೈಲ್ವೆ ಇಲಾಖೆ ತಿಳಿಸಿದೆ. ಆದ್ರೆ ಇಂದು ಯಾವುದೇ ವಿಮಾನವನ್ನು ರದ್ದು ಮಾಡಲಾಗಿಲ್ಲ ಎಂದು ವರದಿಯಾಗಿದೆ.
ಬೆಳಗ್ಗಿನ ಫ್ಲೈಟ್‍ಗಾಗಿ ಟ್ರಾಫಿಕ್ ಜಾಮ್ ಮಧ್ಯೆಯೂ ವಾಹನ ಚಲಾಯಿಸಿ ಮುಂಜಾನೆಯೇ ನಿಲ್ದಾಣಕ್ಕೆ ಬಂದಿದ್ದ ಅನೇಕ ಪ್ರಯಾಣಿಕರು ನಿಲ್ದಾಣದಲ್ಲೇ ಕುಳಿತು ಕಾಲ ಕಳೆಯುವಂತಾಯಿತು.
ಭಾನುವಾರವೂ ಕೂಡ ಮುಂಜಾನೆ ದಟ್ಟ ಮಂಜು ಕವಿದಿದ್ದರಿಂದ ಬೆಳಗ್ಗೆ ಸುಮಾರು 7.30ಯಿಂದ 11 ಗಂಟೆ ವರೆಗೆ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿತ್ತು. ಅಲ್ಲದೇ ನಿನ್ನೆ ಕೆಲ ವಿಮಾನಗಳನ್ನು ರದ್ದುಪಡಿಸಲಾಗಿತ್ತು. 270 ವಿಮಾನಗಳ ಹಾರಾಟ ತಡವಾಗಿತ್ತು.
ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದ ಹಲವಾರು ಪ್ರಯಾಣಿಕರು ಜನಜಂಗುಳಿಯಿಂದ ತುಂಬಿದ್ದ ಏರ್‍ಪೋರ್ಟ್ ನ ಫೋಟೋಗಳನ್ನ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದರು.