ಚೆನ್ನೈ/ಕೊಲಂಬೊ: ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam) ಹಿಂದೂಗಳ ನರಮೇಧ ನಡೆಸಿದ ಉಗ್ರರು (Terrorists) ಇದೀಗ ಶ್ರೀಲಂಕಾದಲ್ಲಿ ರಲೆ ಮರೆಸಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಉಗ್ರರು ಚೆನ್ನೈನಿಂದ ವಿಮಾನದಲ್ಲಿ ಲಂಕಾ ರಾಜಧಾನಿ ಕೊಲಂಬೊ ತಲುಪಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಈ ಕುರಿತು ಭಾರತೀಯ ಗುಪ್ತಚರ ಇಲಾಖೆ (Indian Intelligence Department) ಲಂಕಾ ಅಧಿಕಾರಿಗಳಿಗೆ ನೀಡಿದ ಮಾಹಿತಿ ನೀಡಿ ಆಧರಿಸಿ ಬಂಡರನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (BIA) ತೀವ್ರ ಶೋಧ ನಡೆಸಲಾಯಿತು. ಕೊಲಂಬೊ ಪೊಲೀಸರು ಹಾಗೂ ವಿಶೇಷ ಭದ್ರತಾ ಪಡೆಗಳಿಂದ ಏರ್‌ಪೋರ್ಟ್‌ನಲ್ಲಿ ತೀವ್ರ ತಪಾಸಣೆ ನಡೆಸಲಾಯಿತು.
ಇಂದು (ಮೇ.3) ಬೆಳಗ್ಗೆ 9:55ಕ್ಕೆ ಚೆನ್ನೈನಿಂದ ಹೊರಟಿದ್ದ ವಿಮಾನದಲ್ಲಿ ಭಯೋತ್ಪಾದಕರ ಕುರಿತು ಭಾರತೀಯ ಗುಪ್ತಚರ ಇಲಾಖೆ ಲಂಕಾ ಅಧಿಕಾರಿಗಳಿಗೆ ಮಾಹಿತಿ ನೀಡಿತ್ತು. ಈ ಹಿನ್ನೆಲೆ ಶ್ರೀಲಂಕಾ ಏರ್‌ಲೈನ್ಸ್‌ನ UL-122 ವಿಮಾನವು 11:32ರ ವೇಳೆಗೆ ಕೊಲಂಬೊದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಭದ್ರತಾ ಅಧಿಕಾರಿಗಳು ತೀವ್ರ ಶೋಧ ನಡೆಸಿದರು. ಈ ಹಿನ್ನೆಲೆ ಸಿಂಗಾಪುರಕ್ಕೆ ತಲುಪಬೇಕಿದ್ದ ವಿಮಾನ ಸೇವೆಯಲ್ಲಿ ಕೊಂಚ ವ್ಯತ್ಯಯವಾಯಿತು ಎಂದು ಶ್ರೀಲಂಕಾದ ಏರ್‌ಲೈನ್ಸ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಏ.22ರಂದು ನಡೆದಿತ್ತು ನರಮೇಧ
ಜಮ್ಮು-ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಜನಪ್ರಿಯ ಪ್ರವಾಸಿತಾಣ ಪಹಲ್ಗಾಮ್‌ನಲ್ಲಿ ಕಳೆದ ಏ.22ರಂದು ಉಗ್ರರು ನಡೆಸಿದ ಗುಂಡಿನ ದಾಳಿಗೆ ಇಬ್ಬರು ಕನ್ನಡಿಗರು ಸೇರಿ 26 ಮಂದಿ ಬಲಿಯಾಗಿದ್ದಾರೆ. 2019ರಲ್ಲಿ 40 ಯೋಧರನ್ನು ಬಲಿ ಪಡೆದ ಪುಲ್ವಾಮಾ ದಾಳಿಯ ಬಳಿಕ ಉಗ್ರರು ಕಣಿವೆಯಲ್ಲಿ ನಡೆಸಿದ ಭೀಕರ ದಾಳಿ ಇದಾಗಿದೆ. ಇದುವರೆಗೂ ಭದ್ರತಾಪಡೆಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದ ಉಗ್ರರು, ಇದೇ ಮೊದಲ ಬಾರಿಗೆ ದೊಡ್ಡ ಸಂಖ್ಯೆಯಲ್ಲಿ ಅಮಾಯಕ ಪ್ರವಾಸಿಗರನ್ನು ಟಾರ್ಗೆಟ್ ಮಾಡಿ ಹತ್ಯೆ ಗೈದಿದ್ದರು. ಈ ಘಟನೆ ಇದೀಗ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಭೀತಿ ತಂದೊಡ್ಡಿದೆ.