ಉಡುಪಿ: ಇವತ್ತು ಅಂಡರ್ ವರ್ಲ್ಡ್ ಡಾನ್ ಉಡುಪಿ ಮೂಲದ ಬನ್ನಂಜೆ ರಾಜನ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಬನ್ನಂಜೆ ರಾಜನ ಅಭಿಮಾನಿ ಬಳಗ ಉಡುಪಿಯಲ್ಲಿ ‘ಅಣ್ಣ’ನ ಕಟೌಟ್ ಹಾಕಿದೆ. ಅದೂ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಪಕ್ಕದಲ್ಲೇ ಕಟೌಟ್ ರಾರಾಜಿಸುತ್ತಿದೆ.
ಎಸ್‍ಪಿ ಕಚೇರಿ ಜಂಕ್ಷನ್ ಗೆ ಹೋಗುವ ದಾರಿಯಲ್ಲೇ ಖತರ್ನಾಕ್ ಭೂಗತ ಪಾತಕಿಯ ಕಟೌಟ್ ಇರೋದು ವಿಪರ್ಯಾಸ. ಬಡವರ ರಕ್ಷಕ, ಸಮಾಜ ಸೇವಕ, ಮೆಚ್ಚಿನ ನಾಯಕ ಅಂತ ಬ್ಯಾನರ್ ನಲ್ಲಿ ನಮೂದಿಸಲಾಗಿದೆ. ಬನ್ನಂಜೆ ರಾಜ ಅಭಿಮಾನಿಗಳ ಬಳಗ ರಿಜಿಸ್ಟರ್ ಕೂಡಾ ಆಗಿರೋದು ಮತ್ತೊಂದು ವಿಪರ್ಯಾಸ.
ಹಿಂಡಲಗಾ ಜೈಲಿನಲ್ಲಿರುವ ಬನ್ನಂಜೆ ರಾಜಾ, ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಅನುಭವಿಸುತ್ತಿದ್ದಾನೆ. ಈ ಕಟೌಟ್ ನೋಡಿದರೆ ಬನ್ನಂಜೆ ರಾಜ ಸಮಾಜ ಸೇವಕನಾಗಿ ರಾಜಕೀಯಕ್ಕೆ ಎಂಟ್ರಿ ಆಗ್ತಾನಾ ಅನ್ನೋ ಡೌಟ್ ಶುರುವಾಗಿದೆ.
ಇವತ್ತು ಬೆಳಗ್ಗೆ ಬನ್ನಂಜೆ ರಾಜನ ಅಭಿಮಾನಿಗಳು ಬೆಂಗಳೂರಿನ ಸಂಜಯಗಾಂಧಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಮತ್ತು ಕಂಬಳಿ ವಿತರಿಸುತ್ತಾರೆ ಎನ್ನಲಾಗಿದೆ. ಉಡುಪಿಯ ಮತ್ತು ಬೆಂಗಳೂರಿನ ಡಾನ್ ಅಭಿಮಾನಿಗಳು ಈ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಅಂಡರ್ ವರ್ಲ್ಡ್ ಫೀಲ್ಡ್ ಬಿಟ್ಟು ರಾಜಕೀಯ ಕ್ಷೇತ್ರಕ್ಕೆ ಬನ್ನಂಜೆ ಎಂಟ್ರಿಗೆ ಈ ಹುಟ್ಟುಹಬ್ಬ ಆಚರಣೆ ಮೊದಲ ಹೆಜ್ಜೆ ಅನ್ನೋ ಚರ್ಚೆ ಕೂಡ ಶುರುವಾಗಿದೆ.
ಅನಧಿಕೃತ ಬ್ಯಾನರ್-ಕಟೌಟ್ ಮೇಲೆ ಕಣ್ಣಿಡುವ, ಸಿಕ್ಕಾಪಟ್ಟೆ ಫೈನ್ ಹಾಕುವ ಉಡುಪಿ ನಗರಸಭೆ ಡಾನ್ ಕಟೌಟ್ ಗೆ ಬೆದರಿ ಸುಮ್ಮನಿದ್ಯಾ? ಅನ್ನೋದೇ ಪ್ರಶ್ನೆ. ಅದೂ ಎಸ್‍ಪಿ ಕಚೇರಿ ಪಕ್ಕದಲ್ಲೇ ಕಟೌಟ್ ಇರೋದು ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ.