ಬೆಳಗಾವಿ: ಕಾರ್ ಟಯರ್ ಸ್ಟೋಟಗೊಂಡು ಎದುರುಗಡೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬೆಳಗಾವಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4ರ ಶ್ರೀನಗರ ಬಳಿ ನಡೆದಿದೆ.
ನಂದು ಪವಾರ್, ಅಮೂಲ್ ನಾವಿ, ಸುರೇಶ್ ಕಾನೇರಿ, ಅಮೂಲ್ ಚೌರಿ ಮತ್ತು ಮಹೇಶ್ ಚೌರಿ ಮೃತ ದುರ್ದೈವಿಗಳು. ಮೃತ ಐವರು ಯುವಕರು ಔರಂಗಾಬಾದ್‍ನ ದೇವಗಿರಿ ನಿವಾಸಿಗಳು ಎಂದು ತಿಳಿದು ಬಂದಿದೆ.
ಕಾರಿನಲ್ಲಿ ಒಟ್ಟು ಏಳು ಜನರು ಕೊಲ್ಲಾಪುರದಿಂದ ಬೆಳಗಾವಿಯತ್ತ ಬರುತ್ತಿದ್ದರು. ಈ ವೇಳೆ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4ರ ಶ್ರೀನಗರ ಬಳಿ ಏಕಾಏಕಿ ಕಾರಿನ ಟಯರ್ ಸ್ಫೋಟಗೊಂಡಿದೆ. ಆಗ ಕಾರ್ ಚಾಲಕನ ನಿಯಂತ್ರಣ ತಪ್ಪಿ ಎದುರುಗಡೆ ಬರುತ್ತಿದ್ದ ಲಾರಿಗೆ ವೇಗವಾಗಿ ಹೋಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ ಐದು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಇಬ್ಬರಿಗೆ ಗಂಭೀರವಾಗಿ ಗಾಯವಾಗಿದ್ದು, ಅವರನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಘಟನೆ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.