ಬೆಂಗಳೂರು/ತಮಿಳುನಾಡು: ಲಾರಿ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಐವರು ಮೃತ ಪಟ್ಟಿರುವಂತಹ ದಾರುಣ ಘಟನೆ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಅಲನಕುಲಂ ಬಳಿ ನಡೆದಿದೆ.
ಮೃತರನ್ನು ತಿರುನಲ್ವೇಲಿ ಜಿಲ್ಲೆಯ ಕೆಟಿಸಿ ನಗರ ಮೂಲದ ಮುರುಗನ್, ನಿರಂಜನ್, ರಾಜಶೇಖರ್, ರಾಜಶೇಖರ್ ಪುತ್ರಿ ತನಿಖ(3) ಹಾಗೂ ಮೀನಾಕ್ಷಿಪುರದ ಮುಗೇಶ್ ಎಂದು ಗುರುತಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಘಟನೆಯು ಮಂಗಳವಾರ ಬೆಳಗಿನ ಜಾವ ಸುಮಾರು 5ಗಂಟೆ ನಡೆದಿದ್ದು, ಲಾರಿ ಮತ್ತು ಕಾರ್ ಮುಖಾಮುಖಿ ಡಿಕ್ಕಿ ಹೊಡೆದಿವೆ. ಡಿಕ್ಕಿಯ ರಭಸಕ್ಕೆ ಮೃತ ದೇಹಗಳನ್ನು ಕಾರಿನಿಂದ ಹೊರಗೆ ತೆಗೆಯಲಾಗದಷ್ಟು ಕಾರು ಸಂಪೂರ್ಣ ನಜ್ಜುಗುಜ್ಜಾಗಿತ್ತು. ಇನ್ನೂ ಲಾರಿಯಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಲಾರಿ ಚಾಲಕ ನಿದ್ರೆಯ ಮಂಪರಿನಲ್ಲಿ ಇದ್ದಿದ್ದೆ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಅಲಕುಲಂ ಪೊಲೀಸರು ಭೇಟಿ ನೀಡಿ ಡಿಕ್ಕಿಯ ರಭಸಕ್ಕೆ ಕಾರಿನಲ್ಲಿ ಸಿಲುಕಿದ್ದ ಮೃತ ದೇಹಗಳನ್ನು ಸ್ಥಳೀಯರ ಸಹಾಯದಿಂದ ಹೊರ ತೆಗೆದಿದ್ದಾರೆ.
ಈ ಸಂಬಂಧ ಅಲಕುಲಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.