ಧಾರಾವಾಡ: ಲಾರಿ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ ಅಮರಗೋಳ ಗ್ರಾಮದ ಬಳಿ ನಡೆದಿದೆ.
ರವಿ ಹಂಡಿ(40), ಲೇಖಾಶ್ರಿ ಹಂಡಿ(18), ನವೀನಕುಮಾರ ಹಂಡಿ(14), ಶರಣ(7) ಮತ್ತು ವರ್ಷಾ ಜಿಗಜಿನ್ನಿ (12) ಮೃತ ದುರ್ದೈವಿಗಳು. ಮೃತರೆಲ್ಲರೂ ಬಾಗಲಕೋಟೆಯ ಕವಲಪೇಟ ನಿವಾಸಿಗಳು ಎಂದು ಗರುತಿಸಲಾಗಿದೆ. ಇವರೆಲ್ಲರೂ ಕಾರಿನಲ್ಲಿ ದಾವಣಗೆರೆಯಿಂದ ಬಾಗಲಕೋಟೆಗೆ ಹಿಂದಿರುಗುತ್ತಿದ್ದರು. ಈ ವೇಳೆ ನವಲಗುಂದ-ನರಗುಂದ ಮಧ್ಯೆ ಕಾರು ವೇಗವಾಗಿ ಹೋಗಿ ಲಾರಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ರಭಸಕ್ಕೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ನವಲಗುಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಬಾಗಲಕೋಟೆಯ ಕಾಂಗ್ರೆಸ್ ಮುಖಂಡ ಆನಂದ್ ಜಿಗಜಿನ್ನಿ ಅವರ ಸಂಬಂಧಿ ಎಂದು ತಿಳಿದು ಬಂದಿದೆ.
ಕಾರಿನ ಟಯರ್ ಬ್ಲಾಸ್ಟ್ ಆಗಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಕುರಿತು ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.